ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಶಾಲೆ ಮಾಗಡಿ ರಸ್ತೆಯಲ್ಲಿರುವ ಆರ್ಕಿಡ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ
ಈ ಶಾಲೆ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿಲ್ಲ ಎಂಬ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಹಾಗೂ ಪೋಷಕರಲ್ಲಿ ಆತಂಕ ಎದುರಾಗಿದೆ.
ಶಿಕ್ಷಣ ಇಲಾಖೆಯಿಂದ ಅನುಮತಿಯನ್ನೇ ಪಡೆದುಕೊಳ್ಳದೇ ನಡೆಸುತ್ತಿರುವ ಶಾಲೆಯಲ್ಲಿ ಪ್ರಿ ನರ್ಸರಿಯಿಂದ 7ನೇ ತರಗತಿವರೆಗೂ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪೋಷಕರಿಂದ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯಲಾಗಿದೆ. ಶಾಲೆ ಅನುಮತಿ ಪಡೆದುಕೊಂಡಿಲ್ಲ ಎಂಬ ಮಾಹಿತಿ ದೃಢವಾಗುತ್ತಿದ್ದಂತೆ ಬೆಂಗಳೂರು ಉತ್ತರ-1 ಶೈಕ್ಷಣಿಕ ವಿಭಾಗದ ಬಿಇಒ ರಮೇಶ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಇನ್ನೊಂದೆಡೆ ಶಾಲೆ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ಮಕ್ಕಳಿಗೆ ರಜೆ ನೀಡಲಾಗಿದೆ.