ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಸಿದ ಆರೋಪದ ಮೇಲೆ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಕುಪೇಂದ್ರ ರೆಡ್ಡಿ ಕುದುರೆ ವ್ಯಾಪಾರಕ್ಕಿಳಿದಿದ್ದಾರೆ ಎನ್ನುವ ಆರೋಪದ ಮೇಲೆ ಮಂಡ್ಯ ಶಾಸಕ ಪಿ. ರವಿಕುಮಾರ್ ಗಣಿಗ ದೂರು ನೀಡಿದ್ದು, ಅದರ ಅನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕುಪೇಂದ್ರ ರೆಡ್ಡಿ, ಪಕ್ಷೇತರ ಶಾಸಕಿಯೊಬ್ಬರ ಭಾವ ಡಾ. ಮಹಾಂತೇಶ್, 37 ಕ್ರೆಸೆಂಟ್ ಹೋಟೆಲ್ ಮಾಲೀಕ ರವಿ, ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ವಿರುದ್ಧ ಬೆದರಿಕೆ, ಲಂಚದ ಆಮಿಷ ಸೇರಿ ಇತರೆ ಸೆಕ್ಷನ್ ಅನ್ವಯ ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.