ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 353, 504ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಹರೀಶ್ ಧರಣಿ ನಡೆಸಿದ್ದರು. ಪೊಲೀಸ್ ಠಾಣೆ ನಿಮ್ಮಪ್ಪಂದ ಎಂದು ಬೆಳ್ತಂಗಡಿ ಠಾಣೆ ಪಿಎಸ್ಐ ಮುರಳಿಧರ ನಾಯಕ್ ಅವರಿಗೆ ಬೆದರಿಕೆ ಹಾಕಿದ್ದರು.
ಅಕ್ರಮವಾಗಿ ಕಲ್ಲು ಗಣಿಗಾರಿಕೆಯನ್ನು ಶಾಸಕ ಹರೀಶ ಪೂಂಜಾ ಅವರ ಬೆಂಬಲಿಗರು ನಡೆಸುತ್ತಿದ್ದು, ಬೆಳ್ತಂಗಡಿಯ ಮೆಲಂತಬೆಟ್ಟುವಿನಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ಶಶಿರಾಜ್ ಶೆಟ್ಟಿಯನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಶಾಸಕರು ಪ್ರತಿಭಟನೆ ನಡೆಸಿದ್ದರು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ, ರೌಡಿಶೀಟರ್ ಶಶಿರಾಜ್ ಶೆಟ್ಟಿಯನ್ನು ಬಂಧಿಸಿರುವುದನ್ನು ವಿರೋಧಿಸಿ ರಾತ್ರೋರಾತ್ರಿ ಪೊಲೀಸ್ ಠಾಣೆಯಲ್ಲಿ ಶಾಸಕ ಮತ್ತು ಕಾರ್ಯಕರ್ತರು ಧರಣಿ ನಡೆಸಿದ್ದರು. ಬಿಜೆಪಿ ಮುಖಂಡನನ್ನು ಬಂಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಪಿಎಸ್ಐಗೆ ಶಾಸಕ ಹರೀಶ್ ಪೂಂಜಾ ಧಮ್ಕಿ ಹಾಕಿದ್ದರು. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಶ್ ದಾಖಲಿಸಲಾಗಿದೆ. ಕಲ್ಲು ಕ್ವಾರಿ ಮಾಲಿಕ ಪ್ರಮೋದ್ ದಿಡುಪೆ ಬಂಧಿಸಲು ಹುಡುಕಾಟ ನಡೆಸಲಾಗಿದೆ.