ಕೆರಳದಲ್ಲಿ ಭಾರೀ ಸುದ್ದಿಯಾಗಿದ್ದ ಚಿನ್ನ ಕಳ್ಳಸಾಗಾಟ ಹಗರಣದ ರೂವಾರಿ ಸ್ವಪ್ನಾ ಸುರೇಶ್ ನೀಡಿದ ದೂರಿನ ಅನ್ವಯ ಬೆಂಗಳೂರು ಪೊಲೀಸರು ಕಣ್ಣೂರಿನ ವಿಜೇಶ್ ಪಿಳ್ಳೈ ಎಂಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಹಾಗೂ ಅವರ ಕುಟುಂಬದ ವಿರುದ್ಧದ ತನ್ನ ಆರೋಪಗಳನ್ನು ಹಿಂಪಡೆಯಲು ತನಗೆ 30 ಕೋಟಿ ರೂಗಳ ಆಮೀಷ ಒಡ್ಡಿದ ವಿಜೇಶ್, ಹೀಗೆ ಮಾಡದೇ ಇದ್ದಲ್ಲಿ ತನ್ನ ಹಾಗೂ ತನ್ನಿಡೀ ಕುಟುಂಬವನ್ನು ಮುಗಿಸುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಕೆ ಆರ್ ಪುರಂ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಸ್ವಪ್ನಾ ತಿಳಿಸಿದ್ದಾರೆ. ತನ್ನನ್ನು ಈ ವಿಚಾರವಾಗಿ ಖುದ್ದು ಮುಖ್ಯಮಂತ್ರಿಗಳ ಆಪ್ತ, ಸಿಪಿಐ-ಎಂ ಕೇರಳ ಕಾರ್ಯದರ್ಶಿ ಎಂವಿ ಗೋವಿಂದನ್ ಕಳುಹಿಸಿರುವುದಾಗಿ ವಿಜೇಶ್ ತನ್ನ ಬಳಿ ಹೇಳಿಕೊಂಡಿದ್ದಾಗಿ ಸ್ವಪ್ನಾ ತಿಳಿಸಿದ್ದಾರೆ.
ವಿಜೇಶ್ ಪಿಳ್ಳೈಗೆ ಈ ಸಂಬಂಧ ನೊಟೀಸ್ ಕಳುಹಿಸಿರುವ ಪೊಲೀಸರು, ಆರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಕೋರ್ಟ್‌ನ ಅನುಮತಿ ಮೇರೆಗೆ ಆಪಾದಿತನ ವಿರುದ್ಧ ಐಪಿಸಿ 506 (ಬೆದರಿಕೆ) ಅಡಿ ದೂರು ದಾಖಲಿಸಿದ್ದಾರೆ ಪೊಲೀಸರು.
ಈ ಸಂಬಂಧ ಸ್ವಪ್ನಾ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ತನ್ನನ್ನು ವಿಜೇಶ್ ಭೇಟಿ ಮಾಡಿದ ಎನ್ನಲಾದ ವೈಟ್‌ಫೀಲ್ಡಿನ ಹೊಟೇಲಿನ ಸಿಸಿ ಟಿವಿ ಫುಟೇಜ್‌ಗಳನ್ನು ಸಹ ಪರಿಶೀಲನೆ ಮಾಡಿದ್ದಾರೆ.