ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತಾರಕಕ್ಕೇರಿದ್ದು, ಮಹಾರಾಷ್ಟ್ರದ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದ ಕರವೇ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಗಡಿ ವಿವಾದ ವಿಚಾರವಾಗಿ ಮಹಾ ಸರ್ಕಾರದ ಪುಂಡಾಟ ಖಂಡಿಸಿ ನಿನ್ನೆ ಕರವೇ ಕಾರ್ಯಕರ್ತರು ಗಡಿ ಜಿಲ್ಲೆ ಬೆಳಗಾವಿ ಬಳಿ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಹಾರಾಷ್ಟ್ರದ ಲಾರಿಗಳ ನಂಬರ್ ಪ್ಲೇಟ್ ಗಳನ್ನು ಕಿತ್ತು, ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಅಲ್ಲದೇ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಮಾಹಾರಾಷ್ಟ್ರ ಲಾರಿಗಳ ಗಾಜು ಪುಡಿಗೈದಿದ್ದರು. ಗುಂಪು ಕಟ್ಟಿ ಗಲಾಟೆ ಮಾಡಿದ ಆರೋಪದಡಿ ಹಿರೇಬಾಗೇವಾಡಿ ಪೊಲೀಸರು ಕರವೇಯ 8-12 ಕಾರ್ಯಕರ್ತರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರವೇ ಕಾರಕರ್ತರ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 427, 149ರ ಅಡಿ ಪ್ರಕರಣ ದಾಖಲಾಗಿದೆ.