ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯೊಂದರಲ್ಲಿ ಅಕ್ರಮ ನಡೆದಿದ್ದ ಸಂಬಂಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ದೊಡ್ಡದೊಂದು ದಂಧೆಯ ಜಾಲವನ್ನೇ ಬೆಳಕಿದೆ ತಂದಿದ್ದಾರೆ.
2018-19ರ ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿ ನೇಮಕಾತಿ ಪರೀಕ್ಷೆ ವೇಳೆ 11 ಅಭ್ಯರ್ಥಿಗಳ ಬೆರಳಚ್ಚುಗಳು ಅನುಮಾನಾಸ್ಪದವಾಗಿ ಕಂಡ ಬಳಿಕ ತನಿಖೆ ನಡೆಸಲು ಮುಂದಾದ ದೆಹಲಿ ಪೊಲೀಸರು, ಲಿಖಿತ ಪರೀಕ್ಷೆ ಪಾಸಾಗಿ ಕೆಲಸ ಸೇರಲು ಸಿದ್ಧತೆ ನಡೆಸಿದ್ದ ಈ 11 ಮಂದಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಇವರ ಬೆರಳಚ್ಚುಗಳ ಪರಿಶೀಲನೆ ಸಂದರ್ಭದಲ್ಲಿ; ಪರೀಕ್ಷೆಯಲ್ಲಿ ನೋಂದಾಯಿತವಾದ ಬೆರಳಚ್ಚುಗಳಿಗೂ ಹಾಗೂ ಸಹಿಗಳಿಗೂ ಹೋಲಿಕೆಯಾಗುತ್ತಿಲ್ಲವೆಂದು ಬಯೋಮೆಟ್ರಿಕ್ಸ್‌ನಿಂದ ತಿಳಿದ ಪೊಲೀಸರು, ಅಭ್ಯರ್ಥಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಎಂಟಿಎಸ್ ನೇಮಕಾತಿ ಮೂಲಕ 707 ಹುದ್ದೆಗಳನ್ನು ಭರ್ತಿ ಮಾಡಲು ಲಿಖಿತ ಪರೀಕ್ಷೆಯಲ್ಲಿ 7.5 ಲಕ್ಷ ಮಂದಿ ಹಾಜರಾಗಿದ್ದರು. ಅಡುಗೆ ಬಾಣಸಿಗರು, ನೀರು ಒಯ್ಯುವವರು, ಬೂಟ್ ಪಾಲಿಶ್ ಮಾಡುವವರು, ಅಗಸರು, ದರ್ಜಿಗಳು, ತೋಟ ಮಾಡುವವರು, ಕ್ಷೌರಿಕರು ಹಾಗೂ ಕಾರ್ಪೆಂಟರ್‌ಗಳ ಹುದ್ದೆಗಳಿಗೆ ಈ ನೇಮಕಾತಿ ಹಮ್ಮಿಕೊಳ್ಳಲಾಗಿತ್ತು.
ಪರೀಕ್ಷೆಯ 2018-19ರ ಅವತರಣಿಕೆಯಲ್ಲಿ 2.83 ಲಕ್ಷ ಮಂದಿ ಹಾಜರಾಗಿದ್ದು, ಇವರ ಪೈಕಿ 3,625 ಮಂದಿ ಅರ್ಹರಾಗಿದ್ದಾರೆ. ಬಳಿಕ 408 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇವರ ಪೈಕಿ 268 ಮಂದಿ ಮೂಲ ತರಬೇತಿಗೆ ಸೇರಿಕೊಂಡರೆ, 78 ಮಂದಿ ಅರ್ಜಿಗಳನ್ನು ವಜಾ ಮಾಡಲಾಗಿದ್ದು, 62 ಮಂದಿಯ ಅರ್ಜಿಗಳು ಇನ್ನೂ ಬಾಕಿ ಉಳಿದುಕೊಂಡಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.