ಬೆಂಗಳೂರು : ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧುಬಂಗಾರಪ್ಪಗೆ ಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದ ಹಿನ್ನೆಲೆ ಬಿಜೆಪಿ ರಾಜೀನಾಮೆಗೆ ಒತ್ತಾಯಿಸಿದೆ.
ಟ್ವೀಟ್ ಮಾಡಿರುವ ಬಿಜೆಪಿ ‘ಚೆಕ್ ಬೌನ್ಸ್ ಮಾಡಿ ನ್ಯಾಯಾಲಯದಿಂದ ದಂಡ ಹಾಕಿಸಿಕೊಂಡಿರುವ ಮಹಾನುಭಾವರು ಕರ್ನಾಟಕದ ಶಿಕ್ಷಣ ಸಚಿವರು!! ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿ, ರಾಜ್ಯದ ಶಿಕ್ಷಣ ಇಲಾಖೆಯನ್ನು ಹಳ್ಳ ಹಿಡಿಸಿದ್ದೇ ಅವರ ಸಾಧನೆ. ಬಹುಪಾಲು ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ, ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಇನ್ನು ತಲುಪಿಲ್ಲ, ವಾರಕ್ಕೊಂದು ದಿನ ಬಿಸಿಯೂಟ ದೊರೆತರೇ ಅದೇ ಹೆಚ್ಚು. ಸ್ವಾಮಿ ಸಿಎಂ ಸಿದ್ದರಾಮಯ್ಯ ಅವರೇ, ಇಂತಹ ಶಿಕ್ಷಣ ಸಚಿವರು ರಾಜ್ಯಕ್ಕೆ ಬೇಕೇ..?? ಅಶಿಸ್ತಿನ ಸಚಿವರ ರಾಜೀನಾಮೆ ಪಡೆದು ರಾಜ್ಯ ಶಿಕ್ಷಣ ಇಲಾಖೆಗೆ ಹಿಡಿದಿರುವ ಗ್ರಹಣಕ್ಕೆ ಮುಕ್ತಿ ನೀಡಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದ್ದು, 6 ಕೋಟಿ 96 ಲಕ್ಷದ 70 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ದಂಡ ಕಟ್ಟದೇ ಹೋದರೆ 6 ತಿಂಗಳು ಜೈಲುಶಿಕ್ಷೆ ವಿಧಿಸುವ ಸಾಧ್ಯತೆಯಿದೆ.