ಬೆಂಗಳೂರು: ಸಾರಿಗೆ ಇಲಾಖೆ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಫೆ.17ರವರೆಗೆ ಗಡುವು ನೀಡಿದೆ. ಒಂದು ವೇಳೆ ನಿಗದಿತ ಗಡುವಿನ ಒಳಗೆ ನಂಬರ್ ಪ್ಲೇಟ್ ಅಳವಡಿಸದಿದ್ದರೆ ದಂಡ ಪ್ರಯೋಗಕ್ಕೆ ಮುಂದಾಗಿದೆ.
2019 ಏಪ್ರಿಲ್ 1ಕ್ಕಿಂತ ಹಳೆಯದಾದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-HSRP ಹಾಕಿಸಿಕೊಳ್ಳುವಂತೆ ಸಾರಿಗೆ ಇಲಾಖೆ ನೀಡಿರುವ ಗಡುವು ಫೆ.17ಕ್ಕೆ ಮುಕ್ತಾಯವಾಗಲಿದೆ. ನಂಬರ್ ಪ್ಲೆಟ್ ಬದಲಾವಣೆಗೆ ಹಲವು ವಾಹನ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿ ಮುಟ್ಟಿಸಲು ಇಲಾಖೆ ಮುಂದಾಗಿದೆ.
ವಾಹನಗಳಿಗೆ ಹೆಚ್ ಎಸ್ ಆರ್ ಪಿ ಅಳವಡಿಸದೇ ಮೊದಲ ಬಾರಿ ಸಿಕ್ಕಿಬಿದ್ದರೆ 1000 ರೂಪಾಯಿ ದಂಡ, 2ನೇ ಬಾರಿ ಸಿಕ್ಕಿ ಬಿದ್ದರೆ 2000 ರೂಪಾಯಿ ದಂಡ ಹಾಕಲಾಗುತ್ತದೆ.
ಈವರೆಗೆ ಕೇವಲ 10 ಲಕ್ಷ ವಾಹನಗಳಿಗೆ ಮಾತ್ರ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.