ಗದಗ: ಖಾಸಗಿ ಫೈನಾನ್ಸ್ ನಲ್ಲಿ ವ್ಯಕ್ತಿಯೊಬ್ಬ ಸಾಲ ಮಾಡಿದ್ದು, ಸಕಾಲಕ್ಕೆ ಸಾಲದ ಕಂತು ಮರುಪಾವತಿಸದ ಹಿನ್ನೆಲೆಯಲ್ಲಿ ಆತನ ತಾಯಿಗೆ ಕಿರುಕುಳ ನೀಡಿದ ಘಟನೆ ಗದಗ ನಗರದ ವಡ್ಡರಗೇರಿ ಪ್ರದೇಶದಲ್ಲಿ ನಡೆದಿದೆ.
ಹೂವಯ್ಯ ಎಂಬುವರು ಖಾಸಗಿ ಫೈನಾನ್ಸ್ ನಿಂದ 1.30 ಲಕ್ಷ ರೂ. ಸಾಲ ಪಡೆದಿದ್ದು, 2021 ರಿಂದ ಪ್ರತಿ ತಿಂಗಳು ಸಾಲದ ಕಂತುಗಳನ್ನು ಪಾವತಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಹಣಕಾಸಿನ ತೊಂದರೆಯಾಗಿ ಸಕಾಲಕ್ಕೆ ಸಾಲದ ಕಂತು ಪಾವತಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರ ತಾಯಿ ಗಂಗಮ್ಮ ಅವರಿಗೆ ಕಿರುಕುಳ ನೀಡಲಾಗಿದೆ. ಗಂಗಮ್ಮ ಅವರನ್ನು ಫೈನಾನ್ಸ್ ಕಚೇರಿಗೆ ಕರೆಸಿಕೊಂಡಿದ್ದ ಸಿಬ್ಬಂದಿ ಇಡೀ ದಿನ ಅವರನ್ನು ಕಚೇರಿಯಲ್ಲಿಯೇ ಕೂರಿಸಿದ್ದಾರೆ, ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಖಾಸಗಿ ಫೈನಾನ್ಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹೂವಯ್ಯ ಬೆಂಗಳೂರಿನಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದರು. ಅನಾರೋಗ್ಯದ ಕಾರಣ ಕೆಲಸ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸಾಲದ ಕಂತು ಪಾವತಿಸಲು ಆಗಿಲ್ಲ. ತಾಯಿಯನ್ನು ಕರೆದುಕೊಂಡು ಹೋದ ಸುದ್ದಿ ಕೇಳಿ ಬೆಂಗಳೂರಿನಿಂದ ಆಗಮಿಸಿದ ಅವರು ಫೈನಾನ್ಸ್ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ನೋಟಿಸ್ ನೀಡದೆ ಇಡೀ ದಿನ ತಾಯಿಯನ್ನು ಕೂರಿಸಿಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.