ಸರ್ಕಾರಿ ಉದ್ಯೋಗಿಗಳು ಏರ್ ಟ್ರಾವೆಲ್ ಮಾಡುವ ವಿಷಯದಲ್ಲಿ ಹಣಕಾಸು ಸಚಿವಾಲಯ ಹೊಸ ಸೂಚನೆ ಹೊರಡಿಸಿದೆ ಸರ್ಕಾರಿ ನೌಕರರು ತಮ್ಮ ಅರ್ಹ ಪ್ರಯಾಣದ ವರ್ಗದಲ್ಲಿ ಲಭ್ಯವಿರುವ ಅಗ್ಗದ ದರದ ಶ್ರೇಣಿ ಆಯ್ಕೆ ಮಾಡಿಕೊಳ್ಳಬೇಕು ಮತ್ತು ಪ್ರವಾಸ, ಎಲ್‌ಟಿಸಿಯ ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ ಮೂರು ವಾರಗಳ ಮೊದಲು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವಂತೆ ವಿತ್ತ ಸಚಿವಾಲಯ ಕೇಳಿಕೊಂಡಿದೆ. ಹಾಗೆಯೇ ಅನಗತ್ಯ ಕ್ಯಾನ್ಸಲೇಶನ್ ತಪ್ಪಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಸರ್ಕಾರಿ ನೌಕರರು ಬಾಲ್ಮರ್ ಲಾರಿ ಅಂಡ್ ಕೋ, ಅಶೋಕ್ ಟ್ರಾವೆಲ್ ಮತ್ತು ಟೂರ್ಸ್ ಮತ್ತು ಐ ಆರ್ ಸಿ ಟಿ ಸಿ ಮೂಲಕ ವಿಮಾನ ಟಿಕೆಟ್‌ಗಳನ್ನು ಖರೀದಿಸಬೇಕಾಗಿದೆ.
ಪ್ರವಾಸದ ಉದ್ದೇಶಿತ ಪ್ರಯಾಣದ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮಾಡಿದ ಯಾವುದೇ ಬುಕಿಂಗ್ ಅಥವಾ ಉದ್ದೇಶಿತ ಪ್ರಯಾಣದ 24 ಗಂಟೆಗಳ ಮೊದಲು ಮಾಡಿದ ಯಾವುದೇ ರದ್ದತಿಗೆ ಉದ್ಯೋಗಿಯು ಸ್ವಯಂ ಘೋಷಿತ ಸಮರ್ಥನೆ ವರದಿ ಸಲ್ಲಿಸಬೇಕಾಗುತ್ತದೆ.
ಒಂದೇ ಪ್ರವಾಸಕ್ಕಾಗಿ ಎಲ್ಲಾ ಉದ್ಯೋಗಿಗಳು ಹೊರಟ ವೇಳೆ ಟಿಕೆಟ್‌ಗಳನ್ನು ಒಬ್ಬ ಆಯ್ದ ಟ್ರಾವೆಲ್ ಏಜೆಂಟ್ ಮೂಲಕ ಮಾತ್ರ ಮಾಡಬೇಕು. ಈ ಬುಕಿಂಗ್ ಏಜೆಂಟ್‌ಗಳಿಗೆ ಯಾವುದೇ ಶುಲ್ಕಗಳನ್ನು ಪಾವತಿಸಬಾರದು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಉದ್ಯೋಗಿಗಳು ಅತ್ಯಂತ ಸ್ಪರ್ಧಾತ್ಮಕ ದರ ಪಡೆಯಲು ಮತ್ತು ಬೊಕ್ಕಸದ ಮೇಲಿನ ಹೊರೆ ಕಡಿಮೆ ಮಾಡಲು ಪ್ರವಾಸ ಮತ್ತು ಎಲ್ ಟಿ ಸಿ ಯಲ್ಲಿ ಉದ್ದೇಶಿತ ಪ್ರಯಾಣಕ್ಕೆ ಕನಿಷ್ಠ 21 ದಿನಗಳ ಮೊದಲು ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವುದು ಸೂಕ್ತ ಎಂದು ಹಣಕಾಸು ಇಲಾಖೆ ಹೇಳಿದೆ.