ಕೊರೊನಾ ಲಸಿಕೆ ಅಭಿಯಾನ ಇನ್ನಷ್ಟು ಚುರುಕುಗೊಳ್ಳಬೇಕು ಅಂದರೆ ದೇಶದಲ್ಲಿ ಕೆಲ ತಿಂಗಳುಗಳ ಕಾಲ 24 ಗಂಟೆಯೂ ಲಸಿಕೆ ಅಭಿಯಾನ ನಡೆಸಬೇಕಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ಈ ರೀತಿ ದಿನದ 24 ಗಂಟೆಯೂ ಲಸಿಕೆ ಅಭಿಯಾನವನ್ನ ನಡೆಸಿದ್ದಲ್ಲಿ ಸೆಪ್ಟೆಂಬರ್ ತಿಂಗಳ ವೇಳೆಗೆ 70 ಕೋಟಿ ಜನರಿಗೆ ಲಸಿಕೆ ಸಿಗುವ ವಿಶ್ವಾಸವಿದೆ ಎಂದು ಸಚಿವಾಲಯ ಹೇಳಿದೆ.
ಬುಧವಾರ ಮಾಸಿಕ ವರದಿ ಪ್ರಕಟಿಸಿದ ಆರ್ಥಿಕ ವ್ಯವಹಾರಗಳ ಇಲಾಖೆಯು ಲಸಿಕೆಯ ತ್ವರಿತಗತಿಯ ಬಗ್ಗೆ ಪ್ರಸ್ತಾಪ ಮಾಡಿದೆ. ಸಂಪೂರ್ಣ ದೇಶ ಶೀಘ್ರದಲ್ಲೇ ಕೊರೊನಾದಿಂದ ಗುಣಮುಖವಾಗಬೇಕು ಹಾಗೂ ಆರ್ಥಿಕ ಸ್ಥಿತಿಯು ಚೇತರಿಸಿಕೊಳ್ಳಬೇಕು ಅಂದರೆ ಲಸಿಕೆ ಅಭಿಯಾನಕ್ಕೆ ವೇಗ ನೀಡಲೇಬೇಕಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ 70 ಕೋಟಿ ಜನರಿಗೆ ಲಸಿಕೆ ನೀಡಬೇಕು ಅಂದರೆ 113 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ ಎಂದು ಈ ವರದಿಯು ತಿಳಿಸಿದೆ.
ಅಲ್ಲದೇ ಈ ಗುರಿಯನ್ನ ತಲುಪಬೇಕು ಅಂದರೆ ಪ್ರತಿ ದಿನಕ್ಕೆ 93 ಲಕ್ಷ ಡೋಸ್ ಲಸಿಕೆಯನ್ನ ನೀಡಬೇಕಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ. ಹೀಗಾಗಿ ಈ ಗುರಿಯನ್ನ ಸಾಧಿಸಲಿಕ್ಕಾಗಿ ಮುಂದಿನ ಕೆಲ ತಿಂಗಳುಗಳ ಕಾಲ 24 ಗಂಟೆಯೂ ಲಸಿಕೆ ಸೌಲಭ್ಯ ನೀಡುವಂತೆ ವ್ಯವಸ್ಥೆ ಮಾಡಿ. ಸಾಧ್ಯವಾದರೆ ದಿನಕ್ಕೆ 1 ಕೋಟಿ ಡೋಸ್ ಲಸಿಕೆಯನ್ನ ನೀಡುವಂತಾದರೆ ಇನ್ನೂ ಅನುಕೂಲ ಎಂದು ವರದಿಯು ಹೇಳಿದೆ.