ಚಿಕ್ಕಮಗಳೂರು: ಸಾಲಗಾರರಿಗೆ ಕಿರುಕುಳ ನೀಡದಂತೆ ಮೈಕ್ರೋ ಫೈನಾನ್ಸ್ ಗಳಿಗೆ ಸಿಎಂ ಸಿದ್ಧರಾಮಯ್ಯ ಸೂಚಿಸಿದ್ದರೂ, ದಂಪತಿಗೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ ಘಟನೆ ನಡೆದಿದೆ.
ಕಿರುಕುಳ ತಾಳಲಾರದೆ ದಂಪತಿ ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಬಂದಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬೀರೂರು ಸಮೀಪದ ಆಲದಹಳ್ಳಿಯ ನಿವಾಸಿಗಳಾದ ಉಮೇಶ್ ದಂಪತಿ ಗ್ರಾಮೀಣ ಕೂಟ ಫೈನಾನ್ಸ್ ನಿಂದ 3.85 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಅವರು 4.50 ಲಕ್ಷ ರೂಪಾಯಿಯನ್ನು ಪಾವತಿಸಿದ್ದಾರೆ.
ಇನ್ನೂ 2.25 ಲಕ್ಷ ರೂಪಾಯಿ ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಮನೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕಳೆದ 15 ದಿನಗಳಿಂದ ಉಮೇಶ್ ಮನೆಗೆ ಹೋಗಿಲ್ಲ. ಉಮೇಶ್ ಪತ್ನಿಗೂ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಇದರಿಂದ ದಂಪತಿ ಎಸ್ಪಿ ವಿಕ್ರಂ ಅಮಟೆ ಅವರಿಗೆ ದೂರು ನೀಡಿದ್ದಾರೆ. ಅವರಿಂದ ಮಾಹಿತಿ ಪಡೆದ ಎಸ್ಪಿ ಕ್ರಮ ಕೈಗೊಳ್ಳುವಂತೆ ಬೀರೂರು ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.