ಬೆಂಗಳೂರು: ಹಲವು ಅಡಚಣೆಗಳ ಬಳಿಕ ಕೊನೆಗೂ ಬೆಂಗಳೂರು ವಿಮಾನ ನಿಲ್ದಾಣ ಮಾದರಿಯ ಸರ್ ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಉದ್ಘಾಟನೆಯ ಸದ್ದುಗದ್ದಲವಿಲ್ಲದೆ, ಸೋಮವಾರ ರಾತ್ರಿಯಿಂದ ಕಾರ್ಯಾಚರಣೆ ಶುರುಮಾಡಿದೆ. ಸೋಮವಾರ ರಾತ್ರಿ 7 ಗಂಟೆಗೆ ಬಾಣಸವಾಡಿ- ಎರ್ನಾಕುಲಂ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12684) ಇಲ್ಲಿಂದ ಮೊದಲ ಸಂಚಾರ ಆರಂಭಿಸಿದೆ ಎಂದು ಸೌತ್ವೆಸ್ಟರ್ನ್ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಬೈಯಪ್ಪನಹಳ್ಳಿಯಲ್ಲಿ 314 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಕಳೆದ 14 ತಿಂಗಳಿಂದ ಲೋಕಾರ್ಪಣೆಗಾಗಿ ಕಾಯುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಔಪಚಾರಿಕವಾಗಿ ಚಾಲನೆ ಕೊಡಿಸುವ ಸಲುವಾಗಿ ಇದರ ಲೋಕಾರ್ಪಣೆ ಬಾಕಿ ಉಳಿದಿತ್ತು. ಹೊಸ ಟರ್ಮಿನಲ್ 2015-16ರಲ್ಲಿ ಮಂಜೂರಾಗಿದ್ದು, 2018ರ ಡಿಸೆಂಬರ್ಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ, 2021ರ ಮಾರ್ಚ್ನಲ್ಲಿ ಕಾಮಗಾರಿ ಪೂರ್ಣಗೊಳಿಸಿದೆ.
BIG NEWS: ಕಾಂಗ್ರೆಸ್ ನವರು ಹೆಡ್ಗೆವಾರ್ ಬಗ್ಗೆ ಓದಿದರೆ ಅವರೂ ಬಿಜೆಪಿಗೆ ಬರ್ತಾರೆ; ಟಾಂಗ್ ನೀಡಿದ ಸಚಿವ ಮುರುಗೇಶ್ ನಿರಾಣಿ
ಬೆಂಗಳೂರಿನಲ್ಲಿ ಮೂರನೇ ಕೋಚಿಂಗ್ ಟರ್ಮಿನಲ್ ಅಸ್ತಿತ್ವಕ್ಕೆ ಬಂದ ಕಾರಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಮತ್ತು ಯಶವಂತಪುರ ರೈಲು ನಿಲ್ದಾಣಗಳ ಒತ್ತಡವನ್ನು ಕಡಿಮೆ ಮಾಡುಬಹುದು ಎಂದು ನಿರೀಕ್ಷಿಸಲಾಗಿದೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ದೇಶದ ಮೊದಲ ಅತಿ ದೊಡ್ಡ ಹವಾನಿಯಂತ್ರಿತ ರೈಲು ನಿಲ್ದಾಣ ವ್ಯವಸ್ಥೆಯಾಗಿದೆ. ಇದು ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ರೀತಿಯ ಅನುಭವವನ್ನು ನೀಡುತ್ತದೆ. ಕೇಂದ್ರೀಕೃತ ಹವಾನಿಯಂತ್ರಣ ಮತ್ತು ವಿಮಾನ ನಿಲ್ದಾಣದಂತಹ ಮುಂಭಾಗವನ್ನು ಹೊಂದಿರುವ ಆಧುನಿಕ ನಿಲ್ದಾಣದ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾದರಿಯ ರೈಲ್ವೆ ಟರ್ಮಿನಲ್ ಎಂಟು ಸ್ಟೇಬ್ಲಿಂಗ್ ಲೈನ್ಗಳು ಮತ್ತು ಮೂರು ಪಿಟ್ ಲೈನ್ಗಳನ್ನು ಹೊರತುಪಡಿಸಿ ಏಳು ಪ್ಲಾಟ್ಫಾರ್ಮ್ಗಳನ್ನು ಹೊಂದಿರುತ್ತದೆ. ಪ್ರತಿ ವೇದಿಕೆಯು 15 ಮೀಟರ್ ಅಗಲ ಮತ್ತು 600 ಮೀಟರ್ ಉದ್ದವಿದೆ. 4,200 ಚದರ ಮೀಟರ್ನ ಟರ್ಮಿನಲ್ ಕಟ್ಟಡವು ಪ್ರತಿದಿನ 50,000 ರೈಲು ಸಂಚಾರದ ಸಾಮರ್ಥ್ಯ ಹೊಂದಿದೆ. ಪ್ರತಿದಿನ 50,000 ಜನರನ್ನು ಸಾಗಿಸುತ್ತದೆ. ಮಳೆನೀರು ಕೊಯ್ಲು ಮತ್ತು ಶೇಖರಣಾ ಸೌಲಭ್ಯವನ್ನು ಸಹ ಹೊಂದಿದೆ. ನಾಲ್ಕು ಲಕ್ಷ ಲೀಟರ್ ಸಾಮರ್ಥ್ಯದ ಒಳಚರಂಡಿ ಸಂಸ್ಕರಣಾ ಘಟಕ ಸ್ಥಾಪನೆಯ ಕೆಲಸ ಪ್ರಗತಿಯಲ್ಲಿದೆ. 200 ಕ್ಕೂ ಹೆಚ್ಚು ಕಾರು, 900 ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಇಲ್ಲಿದೆ.