ಹೈದರಾಬಾದ್: ಸಾಕುಪ್ರಾಣಿಗಳಿಗೆಂದೇ ಪೀಪಲ್ ಫಾರ್ ಅನಿಮಲ್ (ಪಿಎಫ್ಎ) ಅಭಯ ಎನ್ಜಿಒ ಶೀಘ್ರದಲ್ಲೇ ಹೈದರಾಬಾದ್ನಲ್ಲಿ ಸ್ಮಶಾನವನ್ನು ಪ್ರಾರಂಭಿಸಲಿದೆ.
ಸತ್ತ ಸಾಕುಪ್ರಾಣಿಗಳಿಗೆ ಉತ್ತಮವಾದ ನಿರ್ಗಮನವನ್ನು ಒದಗಿಸುವ ಉದ್ದೇಶದಿಂದ ಪೀಪಲ್ ಫಾರ್ ಅನಿಮಲ್ (ಪಿಎಫ್ಎ) ಅಭಯ ಎನ್ಜಿಒ ಸ್ಮಶಾನವನ್ನು ಪ್ರಾರಂಭಿಸಲು ಯೋಜಿಸಿದೆ. ಹಲವಾರು ಮಂದಿ ಮನೆಗಳಲ್ಲಿ, ಅಪಾರ್ಟ್ಮೆಂಟ್ ಗಳಲ್ಲಿ ಪ್ರಾಣಿಗಳನ್ನು ಸಾಕುತ್ತಾರೆ. ಆದರೆ, ಅವುಗಳು ಸತ್ತ ನಂತರ ವಿಲೇವಾರಿ ಮಾಡುವುದೇ ದೊಡ್ಡ ಚಿಂತೆಯಾಗಿದೆ.
ಇದಕ್ಕಾಗಿ ಈವರೆಗೆ ಹೈದರಾಬಾದ್ನಲ್ಲಿ ಅಂತಹ ಯಾವುದೇ ಸ್ಥಳ ಅಥವಾ ಸೌಲಭ್ಯಗಳಿಲ್ಲ. ಹೀಗಾಗಿ ಸಾಕುಪ್ರಾಣಿಗಳಿಗಾಗಿ ಸ್ಮಶಾನವನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಪಿಎಫ್ಎಯ ಪಾರುಗಾಣಿಕಾ ನಿರ್ದೇಶಕಿ ಮಂಜಿರಾ ಸೇನ್ ಹೇಳಿದ್ದಾರೆ.
ಆದಷ್ಟು ಶೀಘ್ರದಲ್ಲಿ ಸ್ಮಶಾನ ಪ್ರಾರಂಭಿಸಲು ಎನ್ಜಿಒ ಯೋಜಿಸಿದೆ. ಅಂತಿಮವಾಗಿ ಸುಡುವ ಯಂತ್ರವನ್ನು ಸಂಗ್ರಹಿಸುವ ಹಂತದಲ್ಲಿ ಎನ್ಜಿಒ ಇದ್ದು, ಸಾಕುಪ್ರಾಣಿಗಳಿಗೆ ಅಂತಿಮ ವಿದಾಯ ನೀಡುವ ಸ್ಮಶಾನ ನಿರ್ಮಾಣದ ಹಂತದಲ್ಲಿದೆ ಎಂದು ಮಂಜಿರಾ ಸೇನ್ ತಿಳಿಸಿದ್ದಾರೆ.
ಸ್ಮಶಾನಕ್ಕಾಗಿ ಈಗಾಗಲೇ ಮಾಲಿನ್ಯ ನಿಯಂತ್ರಣ ಮತ್ತು ಅಗತ್ಯವಿರುವ ಇತರ ಅನುಮತಿಗಳಿಂದ ಎಲ್ಲಾ ಅನುಮತಿಗಳನ್ನು ಕೂಡ ಎನ್ಜಿಒ ಪಡೆದಿದೆ. ಈಗಾಗಲೇ ಸ್ಥಳ ಕೂಡ ಮಂಜೂರು ಮಾಡಿದ್ದು, ಶೆಡ್ ನಿರ್ಮಾಣವಾಗಿದೆ. ದಹನ ಯಂತ್ರಕ್ಕಾಗಿ ಹುಡುಕಾಟ ನಡೆಯುತ್ತಿದ್ದು, ಇದರ ವೆಚ್ಚ ಸುಮಾರು 35 ಲಕ್ಷ ರೂ. ಆಗಿದೆ. ಆದರೆ ಎನ್ಜಿಒ ಬಳಿ 13 ಲಕ್ಷ ರೂ.ವರೆಗೆ ದೇಣಿಗೆ ಇದೆ ಎಂದು ಸೇನ್ ಹೇಳಿದ್ದಾರೆ.