
ರಾಷ್ಟ್ರ ರಕ್ಷಣಾ ಪಡೆಯ ಅಧ್ಯಕ್ಷ ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅವಾಚ್ಯ ಪದಗಳ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡ ಆರೋಪದ ಮೇಲೆ ತುಮಕೂರಿನ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಶನಿವಾರದಂದು ಈ ದೂರು ದಾಖಲಿಸಿಕೊಳ್ಳಲಾಗಿದೆ.
ವಕೀಲ ಮತ್ತು ಕೆಪಿಸಿಸಿ ವಕ್ತಾರ ಸೂರ್ಯ ಮುಕುಂದರಾಜು ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ಅವಹೇಳನಕಾರಿ ಪದ ಬಳಸಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಲ್ ಎಚ್ ತೇಜಸ್ ಗೌಡ ಎಂಬವರು ದೂರು ದಾಖಲಿಸಿದ್ದಾರೆ
ಪುನೀತ್ ಕೆರೆಹಳ್ಳಿ ಫೇಸ್ಬುಕ್ ಖಾತೆ ನಿರ್ಬಂಧಿಸಬೇಕು ಹಾಗೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ತುಮಕೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಕಲಂ 504ರ ಅಡಿ ಪುನೀತ್ ಕೆರೆಹಳ್ಳಿ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.