ಶಿವಮೊಗ್ಗ : ಬಾಲ ಕಾರ್ಮಿಕರ ನೇಮಕ ನಿರ್ಮೂಲನೆ ಕಾರ್ಯಾಚರಣೆ ಮಾಡಬೇಕು. ಈ ಕಾರ್ಯಾಚರಣೆ ನಗರ ಪ್ರದೇಶಗಳಿಗೆ ಮಾತ್ರ ಸಿಮೀತವಾಗದೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಕರಣ ದಾಖಲಿಸಿ, ಮಕ್ಕಳ ಸಂರಕ್ಷಣಾ ಕಾರ್ಯ ನಡೆಯಬೇಕೆಂದು ಜಿಲ್ಲಾಧಿಕಾರಿ ಗುತುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜೂ 1 ರಂದು ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ, ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಟಾಸ್ಕ್ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಾಲ ಕಾರ್ಮಿಕರು ಯಾವ ಯಾವ ಕೇತ್ರದಲ್ಲಿ ಹೆಚ್ಚು ಕಂಡು ಬರುತ್ತಿದ್ದಾರೆ ಎಂದು ಪತ್ತೆ ಹಚ್ಚಬೇಕು. ಸಂಬಂಧಿಸಿದ ಅಧಿಕಾರಿಗಳು ಮಕ್ಕಳನ್ನು ರಕ್ಷಿಸುವ ಕೆಲಸ ಜವಾಬ್ಧಾರಿಯುತವಾಗಿ ನಿರ್ವಹಿಸಬೇಕು ಹಾಗೂ ಬಾಲ ಕಾರ್ಮಿಕರನ್ನು ಹೊಂದಿದ ಮಾಲಿಕರ ವಿರುಧ್ದ ಸೂಕ್ತ ಕ್ರಮ ಕೈಗೊಳಬೇಕು.
ಶಾಲೆ ಬಿಟ್ಟ ಮಕ್ಕಳ ಮೇಲೆ ನಿಗಾ ವಹಿಸಬೇಕು. ಪ್ರತಿ ತಿಂಗಳು ಕಡ್ಡಾಯವಾಗಿ ಮಕ್ಕಳ ಹಾಜರಾತಿಯನ್ನು ಪರಿಶೀಲನೆ ಮಾಡಬೇಕು ಹಾಗೂ ಬಾಲ ಕಾರ್ಮಿಕ ಮಕ್ಕಳ ದಾಖಲಾತಿಗೆ ಮೊದಲ ಆದ್ಯತೆ ನೀಡಬೇಕು. ಕೇವಲ ನಗರ ಪ್ರದೇಶದಲ್ಲಿನ ಬಸ್ ನಿಲ್ದಾಣ, ರೈಲು ನಿಲ್ದಾಣ , ಹೋಟೆಲ್ಗಳನ್ನು ಪರಿಶೀಲಿಸದೆ ಗ್ರಾಮಗಳಲ್ಲಿನ ತೋಟ, ಕೃಷಿ ಚಟುವಟಿಕೆ ಪ್ರದೇಶಗಳಲ್ಲಿ ಪರಿಶೀಲನೆ ನೆಡೆಸಿ ಮಕ್ಕಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಬೇಕು. ತಾಲ್ಲೂಕು ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಜಂಟಿಯಾಗಿ ತಪಾಸಣೆ ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶ ಸಂಗ್ರಹ(ಇ-ಶ್ರಮ್) ದ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು ಜಿಲ್ಲೆಯಲ್ಲಿ 3,14,610 ಅಸಂಘಟಿತ ಕಾರ್ಮಿಕರು ಇ-ಶ್ರಮ್ ಯೋಜನೆಯಡಿ ನೋಂದಣಿಯಾಗಿದ್ದು, ಹೆಚ್ಚಿನ ಗುರಿಯನ್ನು ತಲುಪಲು ಅರಿವು ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.