
ತುಮಕೂರು: ಕಚೇರಿ ಸಮಯದಲ್ಲಿ ಪಾರ್ಟಿ ಮಾಡಿ ಹೊಡೆದಾಡಿಕೊಂಡಿದ್ದ ಕೆಪಿಟಿಸಿಎಲ್ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಪಾವಗಡದ ಕೆಪಿಟಿಸಿಎಲ್ ಕಚೇರಿ ಜೂನಿಯರ್ ಇಂಜಿನಿಯರ್ ಮತ್ತು ಸಿಬ್ಬಂದಿ ಬಿಯರ್ ಬಾಟಲಿಯಿಂದ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಮೇ 23ರಂದು ಕಚೇರಿ ಸಮಯದಲ್ಲಿ ಪಾವಗಡ ಹೊರವಲಯದ ತೋಟವೊಂದರಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾರ್ಟಿ ಮಾಡಿದ್ದು, ಪಾರ್ಟಿಯ ನಡುವೆ ಜಗಳವಾಗಿ ಕೈ ಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಸಿಬ್ಬಂದಿ ನರಸಿಂಹಮೂರ್ತಿ ಎಂಬುವರು ಜೂನಿಯರ್ ಇಂಜಿನಿಯರ್ ವರದರಾಜ ಎಂಬುವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದು ತಲೆಗೆ ಪೆಟ್ಟು ಬಿದ್ದು ರಕ್ತ ಸೋರಿದೆ. ವರದರಾಜ ಅವರೂ ಬಿಯರ್ ಬಾಟಲಿ ಹಿಡಿದು ನರಸಿಂಹಮೂರ್ತಿ ಮೇಲೆ ಹಲ್ಲೆ ಮಾಡಿದ್ದಾರೆ.
ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇಂಜಿನಿಯರ್ ಸೇರಿ ನಾಲ್ವರು ಸಿಬ್ಬಂದಿಗೆ ಕಾರಣ ಕೇಳಿ ಮಧುಗಿರಿ ಕೆಪಿಟಿಸಿಎಲ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.