
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಗಡಿ ಗ್ರಾಮ ಸೀಮಾಂಧ್ರ ಪ್ರದೇಶದ ದೇವರಗುಡ್ಡ ಮಾಳಮಲ್ಲೇಶ್ವರ ಜಾತ್ರೆಯಲ್ಲಿ ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಬೆಳಗಿನಜಾವದವರೆಗೆ ನಡೆದ ಬಡಿದಾಟದ ಜಾತ್ರೆಯಲ್ಲಿ 70 ಜನ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುವಾಗ ಉರಿಯುವ ಬೆಂಕಿಯ ಪಂಜುಗಳನ್ನು ತೂರಿದ ವೇಳೆ ನೂಕು ನಗ್ಗಲು ಉಂಟಾಗಿ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ಗಾಯ, ಗಲಾಟೆ ಆಗಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಉತ್ಸವ ಮೂರ್ತಿ ವಶಕ್ಕೆ ಪಡೆಯಲು 11 ಗ್ರಾಮಗಳ 20,000ಕ್ಕೂ ಹೆಚ್ಚು ಜನ ಬಡಿಗೆ ಹಿಡಿದು ಹೊಡೆದಾಡುವ ಸಂದರ್ಭದಲ್ಲಿ ಬೆಂಕಿಯ ಪಂಜು ತೂರಿದ್ದರಿಂದ ಹೆಚ್ಚಿನ ಜನ ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಅದೋನಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.