ಕಲಬುರಗಿ: ಕಲಬುರಗಿಯ ಸಂಗಮೇಶ್ವರ ಕಾಲೋನಿಯಲ್ಲಿ ಹುಡುಗಿಗೆ ಮೆಸೇಜ್ ಕಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಿದ್ಯಾರ್ಥಿಗಳ ಎರಡು ಗ್ಯಾಂಗ್ ನಡುವೆ ಗಲಾಟೆಯಾಗಿದೆ.
ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಆಧರಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು 12ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಸಂಗಮೇಶ್ವರ ಕಾಲೋನಿಯಲ್ಲಿ ಹುಡುಗಿಯೊಬ್ಬಳಿಗೆ ಮೆಸೇಜ್ ಮಾಡಿದ್ದಕ್ಕೆ ಗಲಾಟೆಯಾಗಿದೆ. ಕುಡಿದ ಮತ್ತಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಗಲಾಟೆ ಮಾಡಿಕೊಂಡು ಕಲ್ಲು ತೂರಾಟ ನಡೆಸಿ ಬಡಿಗೆ, ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದು, ಕೆಲವರಿಗೆ ಗಾಯಗಳಾಗಿವೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು ಎನ್ನಲಾಗಿದೆ.