
ಕೋಲಾರ: ಮದ್ಯ ಸೇವಿಸುವ ವೇಳೆ ಸ್ನೇಹಿತರ ನಡುವೆ ಗಲಾಟೆಯಾಗಿದ್ದು, ಓರ್ವನ ಕೊಲೆ ಮಾಡಿದ ಘಟನೆ ಮುಳಬಾಗಿಲು ಹೊರ ವಲಯದಲ್ಲಿ ನಡೆದಿದೆ.
ಹೈದರಿ ನಗರ ನಿವಾಸಿ ಮತಿನ್(25) ಕೊಲೆಯಾದ ವ್ಯಕ್ತಿ. ಅದೇ ಬಡಾವಣೆಯ ನಿವಾಸಿಗಳದ ಮೊಹಿನ್, ಬಾಬಾ ಮತ್ತು ಜಿಲಾನ್ ಹಾಗೂ ಕೊಲೆಯಾದ ಮತಿನ್ ಸ್ನೇಹಿತರಾಗಿದ್ದು, ಮತಿನ್ ಗಾರೆ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ಭಾನುವಾರ ರಾತ್ರಿ ಬಾರ್ ನಲ್ಲಿ ಮದ್ಯ ಸೇವಿಸಲು ಹೋಗಿದ್ದ ವೇಳೆ ಮೊಹಿನ್ ಮತ್ತು ಮತಿನ್ ನಡುವೆ ಜಗಳವಾಗಿದೆ. ಬಾಬಾ ಮತ್ತು ಜಿಲಾನ್ ಕೂಡ ಜಗಳದಲ್ಲಿ ಸೇರಿಕೊಂಡಿದ್ದಾರೆ. ಈ ವೇಳೆ ಮೊಹಿನ್ ತನ್ನ ಬಳಿ ಇದ್ದ ಕಂಬಿಯಿಂದ ಮತಿನ್ ಗೆ ಇರಿದಿದ್ದು, ನಂತರ ಎಲ್ಲರೂ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಕೋಲಾರ ಗ್ರಾಮಾಂತರ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.