ಬೆಂಗಳೂರು: ಡಿಸೆಂಬರ್ 27ರಂದು ನಡೆದಿದ್ದ 58 ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಇದು ಬಿಜೆಪಿ-ಕಾಂಗ್ರೆಸ್- ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಮೂರು ಪಕ್ಷಗಳಿಗೆ ಸ್ಥಳೀಯ ಮಟ್ಟದಲ್ಲಿ ಪಕ್ಷದ ಬಲಾಬಲ ಈ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಆದರೆ ಸಧ್ಯದ ಫಲಿತಾಂಶದ ಪ್ರಕಾರ ಘಟಾನುಘಟಿ ನಾಯಕರ ಕ್ಷೇತ್ರಗಳಲ್ಲೇ ಲೆಕ್ಕಾಚಾರ ತಲೆಕೆಳಗಾಗಿದೆ.
ಚಂದಾಪುರ ಪುರಸಭೆ ಬಿಜೆಪಿ ತೆಕ್ಕೆಗೆ ಬಂದಿದ್ದು ಬಿಜೆಪಿ 13, ಕಾಂಗ್ರೆಸ್ 2, ಪಕ್ಷೇತರ-2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಹೆಬ್ಬಗೋಡಿ ನಗರಸಭೆ ಬಿಜೆಪಿ ವಶವಾಗಿದ್ದರೆ ಚಿತ್ರದುರ್ಗದ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ.
ದಕ್ಷಿಣ ಕನ್ನಡ ಕೋಟೆಕಾರು ಪಟ್ಟಣ ಪಂಚಾಯಿತಿ ಬಿಜೆಪಿ ವಶವಾಗಿದ್ದರೆ ಬೆಳಗಾವಿಯ ಪಟ್ಟಣ ಪಂಚಾಯತ್ ಬಹುತೇಕ ಪಕ್ಷೇತರರ ಪಾಲಾಗಿದೆ. ಅರಬಾವಿ, ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯತ್ ನಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಮಜ್ನು ಮಿಸ್ಸಿಂಗ್…! ಇಲ್ಲಿದೆ ಶೇರ್ವಾನಿ ತೊಟ್ಟ ಯುವಕನ ಅಸಲಿ ಕಹಾನಿ
ಇನ್ನು ಬೆಳಗಾವಿ ಯಕ್ಸಾಂಬಾ ಪಟ್ಟಣ ಪಂಚಾಯಿತಿ ಸಚಿವೆ ಶಶಿಕಲಾ ಜೊಲ್ಲೆಯವರ ಪ್ರಭಾವಿರುವ ಕ್ಷೇತ್ರವಾಗಿದ್ದು, ಸಚಿವರಿಗೆ ತೀವ್ರ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇಲ್ಲಿನ ಬೋರಗಾಂವ ಪಟ್ಟಣ ಪಂಚಾಯಿತಿ ಅತಂತ್ರವಾಗಿದೆ. ಶೇಡವಾಡ ಪಟ್ಟಣ ಪಂಚಾಯಿತಿ ಬಿಜೆಪಿ ವಶವಾಗಿದೆ.
ವಿಜಯಪುರ ನಲತವಾಡ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಾಲಾಗಿದ್ದರೆ, ದೇವರ ಹಿಪ್ಪರಗಿ ಪಟ್ಟಣ ಪಂಚಾಯಿತಿ ಅತಂತ್ರವಾಗಿದೆ. ಆಲಮೇಲ ಪಟ್ಟಣ ಪಂಚಾಯ್ತಿಯಲ್ಲಿಯೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ವಿಜಯಪುರದ ಮನಗೂಳಿ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಒಲಿದಿದೆ.
ಬಾಗಲಕೋಟೆಯ ಕಮತಗಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಹೋಗಿದ್ದರೆ ರನ್ನ ಬೆಳಗಲಿ ಹಾಗೂ ಅಮೀನಗಡ ಪಟ್ಟಣ ಪಂಚಾಯಿತಿ ಅತಂತ್ರವಾಗಿದೆ. ಹಾವೇರಿ ಗುತ್ತಲ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಗೆ ಒಲಿದಿದ್ದರೆ ಕೊಪ್ಪಳ ಕುಕನೂರು ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ. ಉತ್ತರ ಕನ್ನಡದ ಜಾಲಿ ಪಟ್ಟಣ ಪಂಚಾಯಿತಿ ಪಕ್ಷೇತರರ ಪಾಲಾಗಿದೆ.