ಫಿಫಾ ವಿಶ್ವ ಕಪ್ 2022ನ್ನು ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳು ಪ್ರತಿದಿನ ವೀಕ್ಷಿಸುತ್ತಿದ್ದಾರೆ. ಭಾರತೀಯರು ಕ್ರಿಕೆಟ್ ಅನ್ನು ಹೆಚ್ಚು ಪ್ರೀತಿಸುತ್ತಿದ್ದರೂ ದೇಶದಲ್ಲಿ ಫುಟ್ಬಾಲ್ ಅಭಿಮಾನಿಗಳಿಗೇನು ಕೊರತೆ ಇಲ್ಲ.
ಕತಾರ್‌ನಲ್ಲಿ ಪಂದ್ಯಾವಳಿ ನಡೆಯುತ್ತಿರುವಾಗ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಬ್ರೆಜಿಲ್ ಮತ್ತು ಅರ್ಜೆಂಟೀನಾ ತಂಡಗಳ ಅಭಿಮಾನಿಗಳ ನಡುವೆ ಭಾರಿ ಜಗಳ ನಡೆದಿದೆ.
ಬೀದಿ ಕಾಳಗದ 90 ಸೆಕೆಂಡುಗಳ ವೀಡಿಯೊ ವೈರಲ್ ಆಗಿದ್ದು, ಶಕ್ತಿಕುಲಂಗರದಲ್ಲಿ ಎರಡೂ ಕಡೆಯ ಅಭಿಮಾನಿಗಳು ಹೊಡೆದಾಡಿಕೊಂಡಿದ್ದಾರೆ.
ಎರಡೂ ಕಡೆಯವರು ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಪರಸ್ಪರ ದಾಳಿ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ಬಳಿಕ ಎರಡೂ ಗುಂಪುಗಳನ್ನು ಸ್ಥಳೀಯ ಹಿರಿಯರು ಸಮಾಧಾನಪಡಿಸಿದರು. ಪೋರ್ಚುಗಲ್ ಜೆರ್ಸಿ ಧರಿಸಿದ ಕೆಲವು ಅಭಿಮಾನಿಗಳು ಸಹ ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಆರಂಭದಲ್ಲಿ ಎರಡೂ ಕಡೆಯಿಂದ ದೂರು ಬಾರದ ಕಾರಣ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಆದರೆ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾನೂನು ಕ್ರಮ ಪ್ರಾರಂಭಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಎಎನ್‌ಐ ಪ್ರಕಾರ, ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಐಪಿಸಿ ಸೆಕ್ಷನ್ 160 (ಅಪರಾಧ ಎಸಗಿದ್ದಕ್ಕಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಕ್ತಿಕುಲಂಗರ ಗ್ರಾಮಾಂತರ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಘಟನೆ ನಡೆದಿದ್ದು, ಅಪರಿಚಿತರ ವಿರುದ್ಧ ಶಕ್ತಿಕುಲಂಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 160 (ಅಪರಾಧ ಎಸಗಿದ್ದಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.