ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಅಪರೂಪದ ವೈದ್ಯಕೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಗರ್ಭಿಣಿ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ‘ಭ್ರೂಣದಲ್ಲಿ ಮತ್ತೊಂದು ಭ್ರೂಣ’ ಇರುವುದು ಪತ್ತೆಯಾಗಿದೆ. ಅಚ್ಚರಿಯೆಂದರೆ, ಒಂದು ಭ್ರೂಣದಲ್ಲಿನ ಮಗುವಿನ ಹೊಟ್ಟೆಯೊಳಗೆ ಮತ್ತೊಂದು ಭ್ರೂಣ ಬೆಳೆಯುತ್ತಿದೆ.
32 ವರ್ಷದ ಮಹಿಳೆ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಆಸ್ಪತ್ರೆಯಲ್ಲಿ ಸೋನೋಗ್ರಫಿ ಮಾಡಿಸಿದಾಗ ಈ ಅಪರೂಪದ ಸ್ಥಿತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದ ಸ್ತ್ರೀರೋಗ ತಜ್ಞ ಡಾ. ಪ್ರಸಾದ್ ಅಗರ್ವಾಲ್, ಇದು ವಿಶ್ವದಲ್ಲೇ ಅತ್ಯಂತ ವಿರಳ ಪ್ರಕರಣಗಳಲ್ಲಿ ಒಂದು. ಈ ಹಿಂದೆ ಮಾಡಿದ ಸೋನೋಗ್ರಫಿಯಲ್ಲಿ ಇದು ಪತ್ತೆಯಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿಯ ಪ್ರಕರಣಗಳು ಜಗತ್ತಿನಲ್ಲಿ 100-200 ಮಾತ್ರ ಎಂದ ಅವರು, ಭಾರತದಲ್ಲಿ 10-15 ಪ್ರಕರಣಗಳು ಮಾತ್ರ ವರದಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
‘ಫೀಟಸ್ ಇನ್ ಫೆಟು’ ಎಂದರೆ ಒಂದು ಭ್ರೂಣವು ತನ್ನ ಅವಳಿ ಭ್ರೂಣದ ದೇಹದೊಳಗೆ ಬೆಳೆಯುವ ಅಪರೂಪದ ವೈದ್ಯಕೀಯ ಸ್ಥಿತಿ. ಇದನ್ನು ಪರಾವಲಂಬಿ ಅವಳಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಒಂದು ಭ್ರೂಣವು “ಹೋಸ್ಟ್” ಆಗಿ ಕಾರ್ಯನಿರ್ವಹಿಸುತ್ತದೆ, ಇನ್ನೊಂದು ಭ್ರೂಣವು ಅದರೊಳಗೆ ಬೆಳೆಯುತ್ತದೆ. ಈ ಭ್ರೂಣವು ಸಾಮಾನ್ಯವಾಗಿ ಸಂಪೂರ್ಣವಾಗಿ ಬೆಳೆದ ಅಂಗಗಳನ್ನು ಹೊಂದಿರುವುದಿಲ್ಲ.
ಈ ಪ್ರಕರಣದಲ್ಲಿ, ಭ್ರೂಣವು ಬೆಳೆಯುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಛತ್ರಪತಿ ಸಂಭಾಜಿ ನಗರಕ್ಕೆ ಕಳುಹಿಸಲಾಗಿದೆ. ಇಂತಹ ಪ್ರಕರಣಗಳು ಸಾಮಾನ್ಯವಾಗಿ ಮಗು ಜನಿಸಿದ ನಂತರ ಬೆಳಕಿಗೆ ಬರುತ್ತವೆ.