ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಸಿಐಡಿ ತಂಡ ತನಿಖೆ ಪೂರ್ಣಗೊಳಿಸಿದೆ. ಇನ್ನೊಂದು ವಾರದಲ್ಲಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಲಿದೆ.
ಪ್ರಕರಣ ಸಂಬಂಧ 12 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ವರದಿ ಸಿದ್ಧ ಪಡಿಸಲಾಗುತ್ತಿದೆ. ಇನ್ನು ಭ್ರೂಣಲಿಂಗ ಪತ್ತೆ ಸ್ಕ್ಯಾನಿಂಗ್ ಯಂತ್ರಗಳ ಖರೀದಿ ಮೂಲ ಪತ್ತೆಯಾಗಿಲ್ಲ. ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಮಂಡ್ಯದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಇಟ್ಟು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 245 ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಒಂದು ಭ್ರೂಣಲಿಂಗ ಪತ್ತೆ, ಹತ್ಯೆಗೆ ಪ್ಯಾಕೆಜ್ ರೀತಿಯಲ್ಲಿ ಆರೋಪಿಗಳು 60 ಸಾವಿರ ರೂಪಾಯಿ ರೇಟ್ ಫಿಕ್ಸ್ ಮಾಡುತ್ತಿದ್ದರು. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಪ್ರಕರಣ ಪತ್ತೆ ಮಾಡಿ ತನಿಖೆ ನಡೆಸಿದ್ದರು. ಮಂಡ್ಯ, ಮೈಸೂರಿನಲ್ಲಿ ದಾಳಿ ನಡೆಸಲಾಗಿತ್ತು. ಬಳಿಕ ಕೇಸ್ ಸಿಐಡಿಗೆ ವರ್ಗಾವಣೆಯಾಗಿತ್ತು.