ಎಲ್ಲರ ಮನೆ ಅಡುಗೆ ಮನೆಯಲ್ಲೂ ಸರ್ವೇಸಾಮಾನ್ಯವಾಗಿ ಕಂಡು ಬರುವಂತಹ ಪದಾರ್ಥ ಈ ಮೆಂತ್ಯೆ. ಅಡುಗೆ ಭಕ್ಷ್ಯಗಳಿಗೆ ವಿಭಿನ್ನ ರೀತಿಯ ರುಚಿಯನ್ನು ನೀಡುವುದಷ್ಟೇ ಅಲ್ಲದೇ ಇದರಿಂದ ತ್ವಚೆಯ ಆರೋಗ್ಯ ಹಾಗೂ ಸೌಂದರ್ಯಕ್ಕೂ ಹಲವಾರು ಉಪಯುಕ್ತವಾದ ಪ್ರಯೋಜನಗಳಿವೆ.
ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಈ ಮೆಂತ್ಯದಿಂದ, ನಮ್ಮ ಚರ್ಮದ ಹಾಗೂ ಕೂದಲಿನ ಪೋಷಣೆಯನ್ನು ಮಾಡಿಕೊಳ್ಳಬಹುದು. ಇದರಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್ಸ್, ಫೈಬರ್ ಮತ್ತು ಐರನ್ ಅಂಶಗಳು ಯಥೇಚ್ಛವಾಗಿರುವುದರಿಂದ ಉತ್ತಮ ಆ್ಯಂಟಿ ಏಜೆಂಟ್ ಮತ್ತು ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.
ಒಂದು ಚಮಚ ಮೆಂತ್ಯೆ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬೇಕು. ಈ ಪೇಸ್ಟನ್ನು ಒಂದು ಚಮಚ ಮೊಸರಿನ ಜೊತೆ ಮಿಕ್ಸ್ ಮಾಡಿ ಮುಖಕ್ಕೆ ಲೇಪಿಸಿ, 30 ನಿಮಿಷ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು. ಮೆಂತ್ಯೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿರುವುದರಿಂದ ತ್ವಚೆಗೆ ಅದು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಸಿಡ್ ಅಂಶವಿರುವುದರಿಂದ ತ್ವಚೆಯು ಮೃದುವಾಗಿಯೂ ಹಾಗೂ ಹೊಳಪಿನಿಂದಲೂ ಕಂಗೊಳಿಸುತ್ತದೆ.
ಮತ್ತೊಂದು ವಿಶೇಷವೆಂದರೆ ಮೆಂತ್ಯೆಯಿಂದ ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಮಾಡಬೇಕಿರುವುದಿಷ್ಟೇ, ರಾತ್ರಿ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಂಡು, ಕೂದಲಿಗೆ ಪ್ಯಾಕನ್ನು ಲೇಪಿಸಿಕೊಳ್ಳಬೇಕು. 30-40 ನಿಮಿಷದ ನಂತರ ಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಿ.
ವಾರದಲ್ಲಿ ಒಂದು ದಿನ ಹೀಗೆ ಮಾಡಿಕೊಳ್ಳುವುದರಿಂದ ಕೂದಲಿಗೆ ಪ್ರೋಟೀನ್ಸ್ ಲಭಿಸಿ, ದಟ್ಟವಾಗಿಯೂ ಮೃದುವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಹಾಗೆಯೇ ಕೂದಲಿಗೆ ಒಳ್ಳೆಯ ಹೊಳಪೂ ಸಿಗುತ್ತದೆ. ಮೆಂತ್ಯೆ ಅಡುಗೆಗೆ ಮಾತ್ರ ಸೀಮಿತವಾಗಿಲ್ಲದೆ, ತ್ವಚೆಯ ಆರೋಗ್ಯಕ್ಕೂ ಬಹಳ ಉಪಯುಕ್ತವಾಗಿದೆ. ಇದನ್ನು ದಿನನಿತ್ಯದ ನಮ್ಮ ಚಟುವಟಿಕೆಗಳಲ್ಲಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯವನ್ನು ಹಾಗೂ ಸೌಂದರ್ಯವನ್ನು ಪಡೆದುಕೊಳ್ಳಬಹುದು.