ಮಂಗಳೂರು: ತಮಿಳುನಾಡು, ಪುದುಚೆರಿ, ಕೇರಳದಲ್ಲಿ ಅನಾಹುತವನ್ನೇ ಸೃಷ್ಟಿಸಿರುವ ಪೆಂಗಲ್ ಚಂಡಮಾರುತದ ಅಬ್ಬರ ಇದೀಗ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ತಟ್ಟಿದೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದ್ದು, ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕುಂಬ್ಳೆ, ಕೇರಳದ ಕಾಸರಗೋಡು ಸೇರಿದಂತೆ ವಿವಿಧೆಡೆ ಧಾರಾಕಾರವಾಗಿ ಮಳೆಯಾಗುತ್ತಿದೆ. ವರುಣಾರ್ಭಟಕ್ಕೆ ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ದಟ್ಟವಾಗಿ ಮೋಡ ಕವಿದಿದ್ದು, ಬಹುತೇಕ ಕತ್ತಲಾವರಿಸಿದೆ. ಇನ್ನು ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಸಮುದ್ರದಲ್ಲಿ ಬೃಹತ್ ಅಲೆಗಳ ಆರ್ಭಟ ಆರಂಭವಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಪ್ರವಾಸಿಗರು ಹಾಗೂ ಸಾರ್ವಜನಿಕರಿಗೂ ಕಡಲ ಬಳಿ ತೆರಳದಂತೆ ಸೂಚಿಸಲಾಗಿದೆ. ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶ, ಕೆರೆ, ನದಿ, ಬೀಚ್ ಗಳಿಗೆ ಸಾರ್ವಜನಿಕರು, ಪ್ರವಾಸಿಗರು ಇಳಿಯದಂತೆ ಸೂಚಿಸಲಾಗಿದೆ. ಪ್ರಕೃತಿ ವಿಕೋಪ ಉಂಟಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.