ಚೆನ್ನೈ: ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ತಮಿಳುನಾಡು, ಪುದುಚೆರಿ, ಕೇರಳ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಹಲವು ವಿಮಾನ ಹಾರಾಟ, ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ.
ಬಿರುಗಾಳಿ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ 14 ವಿಮಾನಗಳ ಆಗಮನ ಹಾಗೂ ನಿರ್ಗಮನ ರದ್ದು ಮಾಡಲಾಗಿದೆ. ಇಂಡಿಗೋ ವಿಮಾನ ತನ್ನ ಎಲ್ಲಾ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅಬುದಾಬಿಯಿಂದ ಚೆನ್ನೈಗೆ ತೆರಳಬೇಕಿದ್ದ ಇಇಂಡಿಗೋ ವಿಮನವನ್ನು ಬೆಂಗಳೂರು ಏರ್ ಪೋರ್ಟ್ ಗೆ ಮಾರ್ಗ ಬದಲಾಯಿಸಲಾಗಿದೆ. ಚಂಡಮಾರುತದಿಂದಾಗಿ ತಿರುವಳ್ಳೂರು, ಕಾಂಚೀಪುರಂ, ಕಲ್ಲಕುರುಚಿ ಹಾಗೂ ತಮಿಳುನಾಡಿನ ಕಡಲೂರು ಜಿಲ್ಲೆಗಳಲ್ಲಿ ಹಾಗೂ ಪುದುಚೆರಿಯಲ್ಲಿ ಭಾರಿ ಮಳೆಯಾಗುತ್ತಿದೆ.
ಕಾರೈಕಲ್ ಹಾಗೂ ಮಹಾಬಲಿಪುರಂ ನ್ಡುವೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
ತಮಿಳುನಾಡಿನಲ್ಲಿ ಕಂದಾಯ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ರಾಜ್ಯಾದ್ಯಂತ 2,229 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ತಿರುವಳ್ಳೂರು, ನಾಗಪಟ್ಟಣಮ್ ನಲ್ಲಿ 164 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.