ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ಕೊಂಚ ತಣ್ಣಗಾಗಿದ್ದ ಮಳೆರಾಯ ಮಧ್ಯಾಹ್ನವಾಗುತ್ತಿದ್ದಂತೆ ಮತ್ತೆ ಆರರ್ಭಟ್ಟಿಸಲು ಆರಂಭಿಸಿದ್ದಾನೆ.
ಫೆಂಗಲ್ ಚಂಡಮಾರುತದ ಅಬ್ಬರ ಕರ್ನಾಟಕಕ್ಕೂ ತಟ್ಟಿದ್ದು, ಬೆಂಗಳೂರಿನಲ್ಲಿ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆ ಇಂದು ಬೆಳಿಗ್ಗೆ ಸ್ವಲ್ಪ ವಿರಾಮ ಪಡೆದಿತ್ತು. ಇದೀಗ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಮತ್ತದೇ ಅವಾಂತರಗಳು ಸೃಷ್ಟಿಯಾಗಿವೆ.
ಬೆಂಗಳೂರಿನಾದ್ಯಂತ ಮಳೆರಾಯ ಧೋ…ಎಂದು ಒಂದೇ ಸಮನೇ ಸುರಿಯುತ್ತಿದ್ದು, ರಸ್ತೆಗಳು ಜಲಾವೃತಗೊಂಡು, ವಾಹನ ಸವಾರರು ಪರದಾಡುವಂತಾಗಿದೆ. ಹಲವೆಡೆ ತಗ್ಗುಪ್ರದೇಶಗಳು, ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹಲವೆಡೆ ವಿದ್ಯುತ್ ವ್ಯತ್ಯಯವುಂಟಾಗಿದ್ದು, ಕತ್ತಲಲ್ಲಿ ಕಾಲಕಳೆಯುವ ಸ್ಥಿತಿ ಎದುರಾಗಿದೆ.
ಪೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ಕೊಡಗು,ಕೋಲಾರ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಾಳೆಯೂ ಕೂಡ ಮಳೆ ಮುಂದುವರೆಯುವ ಸಾಧ್ಯತೆ ಇದೆ.