
ಕೊಪ್ಪಳ: ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಫೈರಿಂಗ್ ತರಬೇತಿ ವೇಳೆ ಕಾನ್ಸ್ಟೇಬಲ್ ಒಬ್ಬರು ಹಾರಿಸಿದ್ದ ಗುಂಡು ಸಮೀಪದಲ್ಲಿ ಇದ್ದ ಕುರಿಗಾಹಿ ಮಹಿಳೆಯ ಕೈಗೆ ಬಿದ್ದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಬಲಗುಡ್ಡ ಗ್ರಾಮದ ಸಮೀಪದಲ್ಲಿರುವ ಕುಮ್ಮಟದುರ್ಗದಲ್ಲಿ ಪೊಲೀಸ್ ತರಬೇತಿ ಶಾಲೆ ಇದೆ. ಮಂಗಳವಾರ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಫೈರಿಂಗ್ ತರಬೇತಿ ನಡೆಯುತ್ತಿತ್ತು. ರೇಣುಕಮ್ಮ ಎಂಬ ಮಹಿಳೆ ಕುರಿ ಕಾಯುತ್ತಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಒಬ್ಬರು ಹಾರಿಸಿದ ಗುಂಡು ಗುರಿ ತಪ್ಪಿ ರೇಣುಕಮ್ಮನವರ ತೋಳಿಗೆ ಬಿದ್ದಿದೆ. ಕೂಡಲೇ ಅವರನ್ನು ಮುನಿರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.