ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದ ಸಬ್ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆಯಲ್ಲಿ ತಾಯಿಯೊಬ್ಬರು ಹಸುಗೂಸಿನೊಂಡಿಗೆ ಆಗಮಿಸಿದ್ದು, ಆಕೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಂಡಾಗ ಅಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವಿನ ಆರೈಕೆ ಮಾಡಿದ್ದಾರೆ.
ಮಂಗಳವಾರ ನಡೆದ ಈ ಘಟನೆಯ ಚಿತ್ರವನ್ನು ತಮಿಳುನಾಡು ಪೊಲೀಸರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಅವರ ಗೆಸ್ಚರ್ ಅನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಲಿಖಿತ ಪರೀಕ್ಷೆ ಮತ್ತು ಪ್ರಮಾಣಪತ್ರ ಪರಿಶೀಲನೆಯಲ್ಲಿ ತೇರ್ಗಡೆಯಾದವರ ಪೈಕಿ 233 ಅಭ್ಯರ್ಥಿಗಳನ್ನು ಫಿಟ್ನೆಸ್ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು, ಅಲ್ಲಿ ಅಭ್ಯರ್ಥಿಗಳ ಎತ್ತರ, ತೂಕ ಮತ್ತು ಸ್ಟ್ಯಾಮಿನಾ ಪರೀಕ್ಷಿಸಲಾಯಿತು.
ನಿಯಮಗಳ ಕಟ್ಟುನಿಟ್ಟಾದ ಅನುಸರಣೆಯಿಂದಾಗಿ, ಪರೀಕ್ಷೆಗಳನ್ನು ನಡೆಸಿದ ಮೈದಾನದೊಳಗೆ ಸಂಬಂಧಿಕರು ಅಥವಾ ಯಾವುದೇ ವಸ್ತುಗಳನ್ನು ಅನುಮತಿಸಲಾಗುವುದಿಲ್ಲ.
ಹೀಗಾಗಿ ಒಬ್ಬ ಅಭ್ಯರ್ಥಿ ತನ್ನ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಮಗುವನ್ನು ತನ್ನೊಂದಿಗೆ ಪರೀಕ್ಷಾ ಸ್ಥಳಕ್ಕೆ ಕರೆದುಕೊಂಡು ಹೋಗಬೇಕಾದ ಸಂದಿಗ್ಧತೆಗೆ ಸಿಲುಕಿದರು.
ಫಿಟ್ನೆಸ್ ಪರೀಕ್ಷೆಯು ಗಂಟೆಗಟ್ಟಲೆ ನಡೆಯುತ್ತದೆ ಎಂದು ಅರ್ಥಮಾಡಿಕೊಂಡ ಅಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳು ಮಗುವಿನ ಆರೈಕೆಗೆ ಮುಂದಾದರು. ಸೀರೆಯನ್ನು ಬಳಸಿ ತಾತ್ಕಾಲಿಕ ತೊಟ್ಟಿಲು ಸಹ ಮಾಡಿದರು ಮತ್ತು ತಾಯಿ ಪರೀಕ್ಷೆ ಪೂರ್ಣಗೊಳಿಸುವವರೆಗೆ ಮಗುವನ್ನು ನೋಡಿಕೊಂಡರು.