ಬೆಂಗಳೂರು: ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡುತ್ತಿದ್ದ ಪ್ರಕರಣದಲ್ಲಿ 9 ಮಂದಿ ಬಂಧಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಭ್ರೂಣ ಹತ್ಯೆ ಮಾಡಿಸಿದ ಪಾಲಕರಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.
ಪ್ರಕರಣದ ಕಿಂಗ್ ಪಿನ್ ಗಳಾದ ಮೈಸೂರಿನ ಡಾ. ಚಂದನ್ ಬಲ್ಲಾಳ್, ಮಕ್ಕಳ ತಜ್ಞ ಡಾ. ತುಳಸಿರಾಮ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ಹೆಣ್ಣು ಭ್ರೂಣ ಪತ್ತೆ ಹಚ್ಚಿ ಗರ್ಭಪಾತ ಮಾಡಿಸಿದ ಪಾಲಕರ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಅವರಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಬಲ್ಲಾಳ್ ಆಸ್ಪತ್ರೆಯ ರಿಜಿಸ್ಟರ್ ಬುಕ್, ಕಂಪ್ಯೂಟರ್ ಮತ್ತು ಇತರೆ ದಾಖಲಾತಿಗಳಲ್ಲಿ 100ಕ್ಕೂ ಅಧಿಕ ಪಾಲಕರ ಮಾಹಿತಿ ದೊರೆತಿದೆ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಕೂಡ ಮಾಹಿತಿ ನೀಡಿದ್ದಾರೆ. ಇದರ ಆಧಾರದಲ್ಲಿ ಪಾಲಕರಿಗೆ ನೋಟಿಸ್ ನೀಡಲಾಗುವುದು. ಗರ್ಭಪಾತ ಮಾಡಿಸಿಕೊಂಡ ಪಾಲಕರ ವಿಚಾರಣೆ ನಡೆಸಿ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.