ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅವರನ್ನ ಕಂಡರೆ ಇಷ್ಟಪಡುವ ಅಭಿಮಾನಿಗಳು ಕೆಲವೊಮ್ಮೆ ಅತಿರೇಕದಿಂದ ವರ್ತಿಸುತ್ತಾರೆ. ಅಂಥದ್ದೇ ಘಟನೆಯೊಂದರಲ್ಲಿ ದುಬೈ ಪ್ರವಾಸದಲ್ಲಿದ್ದ ಶಾರುಖ್ ಖಾನ್ ಗೆ ಮಹಿಳಾ ಅಭಿಮಾನಿಯೊಬ್ಬರು ಮುತ್ತು ನೀಡಿದ್ದು ನೆಟ್ಟಿಗರು ಟೀಕಿಸಲು ಕಾರಣವಾಗಿದೆ.
ಶಾರುಖ್ ಖಾನ್ ಮಂಗಳವಾರ ದುಬೈನಲ್ಲಿ ತಮ್ಮ ಸ್ನೇಹಿತನಿಗೆ ಸೇರಿದ ರಿಯಲ್ ಎಸ್ಟೇಟ್ ಬ್ರಾಂಡ್‌ನ ಪ್ರಚಾರ ಕಾರ್ಯಕ್ರಮದಲ್ಲಿ ಸೇರಿದ್ದರು. ಕಾರ್ಯಕ್ರಮದ ನಂತರ ಅವರು ಕೆಲವು ಅತಿಥಿಗಳು ಮತ್ತು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಎಲ್ಲರ ಗಮನ ಸೆಳೆದಿದ್ದು ಶಾರುಖ್ ಖಾನ್ ಕೆನ್ನೆಗೆ ಮುತ್ತಿಟ್ಟ ಅಭಿಮಾನಿ. ಇದನ್ನು ತೋರಿಸುವ ವೀಡಿಯೋ ವೈರಲ್ ಆಗಿದ್ದು ನೆಟ್ಟಿಗರು ಇದರಿಂದ ಅಸಮಾಧಾನಗೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಶಾರುಖ್ ತನ್ನ ಮ್ಯಾನೇಜರ್ ಪೂಜಾ ದದ್ಲಾನಿ ಮತ್ತು ಅವರ ಅಂಗರಕ್ಷಕರೊಂದಿಗೆ ನಡೆದು ಬರುತ್ತಿರುತ್ತಾರೆ. ಅವರನ್ನು ನೋಡಿದ ಅತಿಥಿಗಳು ಮತ್ತು ಅಭಿಮಾನಿಗಳು ಸುತ್ತುವರೆಯುತ್ತಾರೆ.
ಈ ವೇಳೆ ಮಹಿಳೆಯೊಬ್ಬರು ಶಾರುಖ್ ಬಳಿಗೆ ಬಂದು, “ನಾನು ನಿಮಗೆ ಒಂದು ಕಿಸ್ ನೀಡಬಹುದೇ?” ಎಂದು ಕೇಳುತ್ತಾರೆ. ಆದರೆ ಶಾರುಖ್ ಉತ್ತರಿಸುವ ಮೊದಲು, ಮಹಿಳೆ ನಟನ ಕೆನ್ನೆಗೆ ಮುತ್ತು ಕೊಟ್ಟು ನಗುತ್ತಾ ಖುಷಿಯಿಂದ ಅಲ್ಲಿಂದ ದೂರ ಸರಿಯುತ್ತಾರೆ.
ಮಹಿಳೆಯ ಈ ಕಾರ್ಯವನ್ನು ಮೆಚ್ಚಿಕೊಳ್ಳದ ನೆಟ್ಟಿಗರು ಅವರನ್ನು ಜೈಲಿಗೆ ಹಾಕಿ ಎಂತೆಲ್ಲಾ ಕಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ನಟರೊಂದಿಗೆ ಇಂತಹ ವರ್ತನೆ ಸರಿಯಲ್ಲ ಎಂದರೆ ಕೆಲವರು, ಪುರುಷ ಅಭಿಮಾನಿಗಳು ನಟಿ ಮಾಧುರಿಗೆ ಮುತ್ತಿಟ್ಟರೆ ಇದೇ ರೀತಿ ಇರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.