ಕಾನ್ಪುರ್: ಕರ್ವಾ ಚೌತ್ ಆಚರಿಸಲು ಮನೆಗೆ ತೆರಳುತ್ತಿದ್ದ ಮಹಿಳಾ ಪೊಲೀಸ್ ಗೆ ಲಿಫ್ಟ್ ಕೊಡುವುದಾಗಿ ಹೇಳಿ ಕರೆದೊಯ್ದ ನೆರೆಮನೆ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ. ಆರೋಪಿ ಮಹಿಳೆಯ ಪರಿಚಯಸ್ಥನಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರದಂದು ಆರೋಪಿಯು ಸೇನ್-ಪಶ್ಚಿಮ್ ಪಾರಾ ಪ್ರದೇಶದಲ್ಲಿ ತನ್ನ ಮೋಟಾರ್ ಸೈಕಲ್‌ನಲ್ಲಿ ಲಿಫ್ಟ್ ನೀಡಿದ ನಂತರ ಮಹಿಳೆಯನ್ನು ಪ್ರತ್ಯೇಕ ಪ್ರದೇಶಕ್ಕೆ ಕರೆದೊಯ್ದು ಕೃತ್ಯವೆಸಗಿದ್ದಾನೆ.
ಅಯೋಧ್ಯೆಯ ರಿಸರ್ವ್ ಪೊಲೀಸ್ ಲೈನ್ ಗೆ ಸೇರಿದ ಮಹಿಳಾ ಹೆಡ್ ಕಾನ್ಸ್ ಟೇಬಲ್ ಶನಿವಾರ ರಾತ್ರಿ ‘ಕರ್ವಾ ಚೌತ್’ ಹಬ್ಬ ಆಚರಿಸಲು ಕಾನ್ಪುರಕ್ಕೆ ಬಂದಿದ್ದಾರೆ. ತನ್ನ ಹಳ್ಳಿಗೆ ಹೋಗುತ್ತಿದ್ದಾಗ ತನ್ನ ನೆರೆಹೊರೆಯವರಾದ ಧರ್ಮೇಂದ್ರ ಪಾಸ್ವಾನ್ ಅವರಿಂದ ಬೈಕ್ ನಲ್ಲಿ ಲಿಫ್ಟ್ ಪಡೆದುಕೊಂಡಿದ್ದಾರೆ. ಅವರನ್ನು ಮನೆಗೆ ಬಿಡುವ ಬದಲು ಪಾಸ್ವಾನ್ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(ಕಾನೂನು ಮತ್ತು ಸುವ್ಯವಸ್ಥೆ) ಹರೀಶ್ ಚಂದರ್ ಹೇಳಿದ್ದಾರೆ.
ಘಟಂಪುರ ಸಹಾಯಕ ಪೊಲೀಸ್ ಕಮಿಷನರ್ ರಂಜೀತ್ ಕುಮಾರ್ ಮಾತನಾಡಿ, ಪಾಸ್ವಾನ್ ತನ್ನ ವಸ್ತ್ರವನ್ನು ತೆಗೆದುಹಾಕಲು ಪ್ರಯತ್ನಿಸಿದಾಗ ಮಹಿಳೆ ವಿರೋಧಿಸಿದ್ದಾರೆ. ಆದರೆ ಸಹಾಯ ಮಾಡಲು ಯಾರೂ ಇರಲಿಲ್ಲ. ಹಲ್ಲೆಯ ನಂತರ ಸಂತ್ರಸ್ತೆ ಆರೋಪಿ ಬೆರಳಿಗೆ ಕಚ್ಚಿ ಹೇಗೋ ಪರಾರಿಯಾಗಿದ್ದಾಳೆ ಎಂದು ಹೇಳಿದ್ದಾರೆ.
ನಂತರ ಮಹಿಳೆ ಹತ್ತಿರದ ಪೊಲೀಸ್ ಔಟ್ ಪೋಸ್ಟ್ ಗೆ ಬಂದು ಘಟನೆಯ ಬಗ್ಗೆ ತಿಳಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧಿಸಿದರು ಎಂದು ತಿಳಿಸಿದ್ದಾರೆ.
ಸೇನ್-ಪಶ್ಚಿಮ್ ಪಾರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಕೆಯ ಗೌಪ್ಯತೆಯನ್ನು ರಕ್ಷಿಸಲು ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಲಾಗಿಲ್ಲ.