ಬೆಂಗಳೂರು: ಶಾಲಾ ಶುಲ್ಕದಲ್ಲಿ ಶಿಕ್ಷಣ ಇಲಾಖೆ ಶೇಕಡ 30 ರಷ್ಟು ಕಡಿತಗೊಳಿಸಿದೆ. ಬೋಧನಾ ಶುಲ್ಕದಲ್ಲಿ ಶೇಕಡ 30 ರಷ್ಟು ಕಡಿತಗೊಳಿಸಿದ್ದರೂ ಕೆಲ ಶಾಲೆಗಳಲ್ಲಿ ಸಂಪೂರ್ಣ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ.
ಇದಕ್ಕಾಗಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸಿ ಶಾಲಾ ಶುಲ್ಕ ವಿಚಾರವಾಗಿ ಪೋಷಕರಿಂದ ದೂರು ಸ್ವೀಕರಿಸಲಾಗುವುದು. ಶಾಲೆಗಳು ಶುಲ್ಕವನ್ನು ಕಡಿತ ಮಾಡದಿದ್ದರೆ ಪೋಷಕರು ದೂರು ನೀಡಬಹುದು. ದೂರು ಇತ್ಯರ್ಥಕ್ಕೆ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ 6 ವಲಯಗಳಿಗೆ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಜಿಲ್ಲೆಗಳಲ್ಲಿ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಶುಲ್ಕ ಸಂಬಂಧಿತ ತಕರಾರು ಸ್ವೀಕರಿಸುವ ಮತ್ತು ಇತ್ಯರ್ಥಪಡಿಸುವ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.
ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಶೇಕಡ 30 ರಷ್ಟು ಬೋಧನಾ ಶುಲ್ಕವನ್ನು ಕಡಿತ ಮಾಡಲಾಗಿದೆ. ಹೀಗಿದ್ದರೂ, ಪೂರ್ಣ ಶುಲ್ಕ ಪಾವತಿಗೆ ಶಾಲೆಗಳಿಂದ ಒತ್ತಡ ಹೇರಲಾಗ್ತಿದೆ ಎಂದು ಪೋಷಕರು ದೂರಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.