ಬೆಂಗಳೂರು: 2024ರ ಜನವರಿ 1ರಿಂದ ವಾಹನ ಚಾಲನಾ ತರಬೇತಿ ದುಬಾರಿಯಾಗಲಿದೆ. ಡ್ರೈವಿಂಗ್ ಸ್ಕೂಲ್ ಗಳಲ್ಲಿ ತರಬೇತಿ ಶುಲ್ಕ ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ವಾಹನ ಚಾಲನಾ ತರಬೇತಿ ಜನವರಿ 1ರಿಂದ ದುಬಾರಿಯಾಗಲಿದ್ದು, ಕಾರ್ರ ಚಾಲನೆ ಕಲಿಯಲು 7 ಸಾವಿರ ರೂಪಾಯಿ ವ್ಯಯಿಸಬೇಕಾಗುತ್ತದೆ. ಲಘು ಮೋಟಾರು ವಾಹನ, ಮೋಟಾರ್ ಸೈಕಲ್, ಆಟೋರಿಕ್ಷಾ, ಸಾರಿಗೆ ವಾಹನಗಳೆಂದು ನಾಲ್ಕು ವರ್ಗದಲ್ಲಿ ಶುಲ್ಕ ನಿಗದಿಪಡಿಸಲಾಗಿದೆ.
ಲಘು ಮೋಟಾರ್ ವಾಹನ ಚಾಲನಾ ತರಬೇತಿಗೆ 7,000 ರೂ., ಎಲ್ಎಲ್ ಗೆ 350 ರೂ., ಡಿಎಲ್ ಗೆ 1 ಸಾವಿರ ರೂ. ಪ್ರತ್ಯೇಕವಾಗಿ ಆರ್.ಟಿ.ಓ. ಕಚೇರಿಗೆ ಪಾವತಿಸಬೇಕು. ಕಾರ್ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು 8350 ರೂ. ಖರ್ಚಾಗುತ್ತದೆ. ಪ್ರಸ್ತುತ ಕಾರ್ ಡ್ರೈವಿಂಗ್ ತರಬೇತಿಗೆ 4000 ರೂ. ಶುಲ್ಕವಿದೆ. ಇದಕ್ಕಿಂತ ಹೆಚ್ಚಿನ ಹಣ ಪಡೆದು ಡ್ರೈವಿಂಗ್ ಸ್ಕೂಲ್ ನವರು ಅವರೇ ಎಲ್.ಎಲ್., ಡಿಎಲ್ ಮಾಡಿಸಿಕೊಡುತ್ತಾರೆ. 10 ವರ್ಷದಿಂದ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಡ್ರೈವಿಂಗ್ ಸ್ಕೂಲ್ ಗಳ ಬೇಡಿಕೆಯಂತೆ ಶುಲ್ಕ ಪರಿಷ್ಕರಣೆ ಮಾಡಿದ್ದು, ಇದರ ಅನ್ವಯವೇ ಶುಲ್ಕ ಪಡೆಯಬೇಕು ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ. . ಈಗ ತರಬೇತಿ ಶುಲ್ಕ ಹೆಚ್ಚಳ ಮಾಡಿರುವುದರಿಂದ ಇದಕ್ಕಿಂತ ಹೆಚ್ಚು ಹಣ ಪಾವತಿಸಬೇಕಿದ್ದು, ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದು ಹೇಳಲಾಗಿದೆ.