ಎರಡು ವರ್ಷಗಳಿಗೂ ಹೆಚ್ಚು ಕಾಲ ಲೈಂಗಿಕ ಶೋಷಣೆಯಿಂದ ಬೇಸತ್ತ 24 ವರ್ಷದ ಯುವತಿಯೊಬ್ಬಳು ಸೋಮವಾರ ತನ್ನ ಮಲತಂದೆಯನ್ನು ಚಾಕುವಿನಿಂದ ಹಲ್ಲೆ ನಡೆಸಿ ಆತನ ಜನನಾಂಗವನ್ನೇ ಕತ್ತರಿಸಿದ್ದಾಳೆ. ಈ ಘಟನೆ ನಲಸೋಪಾರ ಪೂರ್ವದ ಚಾಲ್‌ನಲ್ಲಿ ಮಧ್ಯಾಹ್ನ 3:00 ಗಂಟೆ ಸುಮಾರಿಗೆ ನಡೆದಿದೆ. ಈ ದಾಳಿಯಲ್ಲಿ ಯುವತಿಯ ಮಲತಂದೆ ಗಂಭೀರವಾಗಿ ಗಾಯಗೊಂಡಿದ್ದು, ಕಾಂದಿವಲಿಯ ಶತಬ್ದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ತುಲಿಂಜ್ ಪೊಲೀಸರ ಪ್ರಕಾರ, ಸೋಮವಾರ ಆಕೆ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಲು ಯತ್ನಿಸಿದ ನಂತರ ಯುವತಿ 56 ವರ್ಷದ ಮಲತಂದೆ ಮೇಲೆ ಹಲ್ಲೆ ನಡೆಸಿದ್ದಾಳೆ. ಆತನಿಗೆ ಕಣ್ಣಿಗೆ ಬಟ್ಟೆ ಕಟ್ಟುವಂತೆ ಮನವೊಲಿಸಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ ಆತನ ಜನನಾಂಗವನ್ನೇ ಕತ್ತರಿಸಿದ್ದಾಳೆ. ನೋವಿನಿಂದ ಕಿರುಚುತ್ತಾ, ರಕ್ತದ ಕಲೆಗಳಿಂದ ಕೂಡಿದ ಬಟ್ಟೆಯೊಂದಿಗೆ ಆತ ಮನೆಯಿಂದ ಓಡಿ ಬಂದಿದ್ದಾನೆ.
ಯುವತಿ ಆತನನ್ನು ಹಿಂಬಾಲಿಸಿ ರಸ್ತೆಯಲ್ಲಿ ಮತ್ತೆ ಚಾಕುವಿನಿಂದ ಇರಿದಿದ್ದಾಳೆ. ಆಶ್ಚರ್ಯಚಕಿತರಾದ ಪ್ರತ್ಯಕ್ಷದರ್ಶಿಗಳು ಯುವತಿ ಕೈಯಲ್ಲಿ ಚಾಕುವಿನೊಂದಿಗೆ ತಿರುಗಾಡುತ್ತಿರುವ ವಿಡಿಯೋಗಳನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬರು ಪೊಲೀಸ್ ತುರ್ತು ಸಂಖ್ಯೆಗೆ ಕರೆ ಮಾಡಿದ್ದು, ನಂತರ ಪೊಲೀಸರು ಸ್ಥಳಕ್ಕೆ ತಲುಪಿ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಸ್ತುತ, ತುಲಿಂಜ್ ಪೊಲೀಸರು ಯುವತಿಯನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಮಲತಂದೆ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತು ಯುವತಿ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ನಾವು ಶೀಘ್ರದಲ್ಲೇ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ” ಎಂದು ತುಲಿಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.