ಉತ್ತರ ಪ್ರದೇಶದಲ್ಲಿ ನಡೆದಿರುವ ಬುಲ್ಡೋಜರ್ ಕಾರ್ಯಾಚರಣೆ ಅಲ್ಲಿ ಪುಂಡ ಪೋಕರಿಗಳ ಎದೆ ನಡುಕ ಹುಟ್ಟಿಸಿರುವ ಅನೇಕ ಉದಾಹರಣೆ ಕಂಡುಬಂದಿದೆ. ಇತ್ತೀಚೆಗಷ್ಟೇ ಇನ್ನೊಂದು ತಾಜಾ ಉದಾಹರಣೆಯಲ್ಲಿ, ತಲೆ ಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿಯು ಬುಲ್ಡೋಜರ್ ಆಕ್ಷನ್ಗೆ ಹೆದರಿ ಪೊಲೀಸರಿಗೆ ಶರಣಾಗಿದ್ದಾನೆ.
ಉತ್ತರ ಪ್ರದೇಶದ ಪೊಲೀಸರು ಬುಲ್ಡೋಜರ್ಗಳನ್ನು ಬಳಸಿ ಅಪರಾಧಿಗಳ ಆಸ್ತಿಯನ್ನು ಧ್ವಂಸಗೊಳಿಸುತ್ತಿರುವುದು ವಿವಾದಕ್ಕೆ ಕಾರಣವಾಗಿರುವ ನಡುವೆಯೂ ಇಂತಹ ಒಂದಷ್ಟು ಬೆಳವಣಿಗೆ ನಡೆದಿದೆ. ಕಾನೂನು ಉಲ್ಲಂಘಿಸಿ ಪರಾರಿಯಾಗಿರುವವರಲ್ಲಿ ಅವರಲ್ಲಿ ಭಯ ಹುಟ್ಟಿಸಲು ಬುಲ್ಡೋಜರ್ಗಳನ್ನು ಅಸ್ತ್ರವಾಗಿ ಬಳಸುತ್ತಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯೊಬ್ಬ ಫತೇಪುರ್ನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಕೂಡಲೇ ನಮ್ಮ ಮುಂದೆ ಹಾಜರಾಗದಿದ್ದಲ್ಲಿ ನಿನ್ನ ಮನೆಯನ್ನು ಬುಲ್ಡೋಜರ್ನಿಂದ ಕೆಡವುದಾಗಿ ಬೆದರಿಕೆ ಹಾಕಿದ್ದ ಪೊಲೀಸರು ಸೋಮವಾರ ಆರೋಪಿಯ ಮನೆ ಮುಂದೆ ಬುಲ್ಡೋಜರ್ ತಂದು ನಿಲ್ಲಿಸಿದ್ದರು.
ವಿಷಯ ತಿಳಿದ ಆರೋಪಿ ಅಂಕಿತ್, ನನ್ನ ಮನೆಯನ್ನು ಕೆಡವಬೇಡಿ ಮತ್ತು ನಾನು ಶರಣಾಗಲು ಸಿದ್ಧ ಎಂದು ಓಡಿಬಂದಿದ್ದಾನೆ. ಕುಟುಂಬದವರೂ ಜೊತೆಗೆ ಬಂದು ಕ್ಷಮೆಯಾಚಿಸಿ, ಮನೆ ಕೆಡವದಂತೆ ಅಂಗಲಾಚಿದರು.