ರಾಜಸ್ಥಾನದ ಸಿರೋಹಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧನ ಭೀತಿಯಿಂದ ತಹಶೀಲ್ದಾರ್ ಅಡುಗೆಯ ಮನೆ ಒಲೆ ಮೇಲೆ 15 ಲಕ್ಷ ರೂಪಾಯಿ ನಗದು ಸುಟ್ಟು ಹಾಕಿದ್ದಾರೆ.
ಕಲ್ಪೇಶ್ ಕುಮಾರ್ ಜೈನ್ ಹಣ ಸುಟ್ಟು ಹಾಕಿದ ಆರೋಪಿ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ ವೇಳೆ ಅಡುಗೆ ಮನೆಯಲ್ಲಿ ಇದ್ದ ಸ್ಟವ್ ಮೇಲೆ 15 ಲಕ್ಷ ರೂಪಾಯಿ ಇಟ್ಟು ಸುಟ್ಟು ಹಾಕಿದ್ದಾರೆ ಎಂದು ಗೊತ್ತಾಗಿದೆ.
ಅಂದ ಹಾಗೆ, ಕಲ್ಪೇಶ್ ಕುಮಾರ್ ಕಂದಾಯ ನಿರೀಕ್ಷಕ ಪರ್ವತ್ ಸಿಂಗ್ ಮೂಲಕ 1 ಲ್ಕಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕಂದಾಯ ಅಧಿಕಾರಿ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಅದನ್ನು ತಹಶೀಲ್ದಾರ್ ಗೆ ತಲುಪಿಸುವ ಹಂತದಲ್ಲಿ ಎಸಿಬಿ ದಾಳಿ ಮಾಡಿದೆ.
ಭಯದಿಂದ ಮನೆಗೆ ಬೀಗ ಹಾಕಿದ ಕಲ್ಪೇಶ್ 15 ಲಕ್ಷ ರೂಪಾಯಿ ಸುಟ್ಟು ಹಾಕಿದ್ದಾನೆ. ಪಟ್ಟು ಬಿಡದ ಎಸಿಬಿ ತಂಡ ಮನೆಯೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಅಡುಗೆಮನೆಯಲ್ಲಿ ಸುಟ್ಟ ಕರೆನ್ಸಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಯ ಮನೆಯಲ್ಲಿ 1.5 ಲಕ್ಷ ರೂಪಾಯಿ ನಗದು, ಆಸ್ತಿ ಪತ್ರ, 8 ಬ್ಯಾಂಕ್ ಖಾತೆ, ಮೂರು ಅಂಚೆ ಕಚೇರಿ ಖಾತೆಗಳು, ಅನೇಕ ಬ್ಯಾಂಕ್ ಲಾಕರ್ ಗಳು ಇರುವ ಬಗ್ಗೆ ದಾಖಲೆ ಪತ್ರಗಳು ಸಿಕ್ಕಿವೆ.
ಕಲ್ಪೇಶ್ ಜೈನ್, ಕಂದಾಯ ಅಧಿಕಾರಿ ಪರ್ವತ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪಾಲಿ ಭ್ರಷ್ಟಾಚಾರ ನಿಗ್ರಹ ದಳದ ಎಸಿಪಿ ನಾರ್ಪತ್ ಚಂದ್ರ ತಿಳಿಸಿದ್ದಾರೆ.