ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಸಾಂಕ್ರಾಮಿಕ ರೋಗಗಳು ತಾಂಡವವಾಡುತ್ತಿದೆ. ಡೆಂಗ್ಯೂ, ಇಲಿಜ್ವರ ಸೇರಿದಂತೆ ಹಲವು ರೋಗಗಳಿಂದ ಜನರು ಭಯ ಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ವಾಂತಿ-ಬೇಧಿ ಪ್ರಕರಣಗಳ ನಿಯಂತ್ರಣಕ್ಕೆ ಸಾರ್ವಜನಿಕರು ಕುದಿಸಿ, ಆರಿಸಿ ಸೋಸಿದ ನೀರು ಕುಡಿಯಬೇಕು ಆರೋಗ್ಯ ಇಲಾಖೆ ತಿಳಿಸಿದೆ. ಸಂಡೂರು ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿ ಶಂಕಿತ ವಾಂತಿ ಬೇಧಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಮುಂಜಾಗ್ರತೆಯಾಗಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಾರ್ವಜನಿಕರಿಗೆ ಜಾಗೃತಿ ನೀಡಿ ಅವರು ಮಾತನಾಡಿದರು.
ಕಲುಷಿತ ಆಹಾರ ಸೇವನೆಯಿಂದ ಸಾಮಾನ್ಯವಾಗಿ ವಾಂತಿ ಬೇಧಿ ಸೇರಿದಂತೆ ಟೈಫಾಯಿಡ್, ಕಾಲಾರ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿದ್ದು, ಯಾವುದೇ ನೀರನ್ನು ಕುಡಿಯಲು ನೇರವಾಗಿ ಬಳಸದೇ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು ಎಂದು ಮನವರಿಕೆ ಮಾಡಿಕೊಟ್ಟರು.
ಓಆರ್ಎಸ್ ಜೀವಜಲವನ್ನು ತಯಾರಿಸುವಾಗ 1ಲೀ ನೀರಿಗೆ ಇಲಾಖೆಯಿಂದ ಕೊಡುವ ಪೊಟ್ಟಣದಲ್ಲಿರುವ ಪುಡಿಯನ್ನು ಸಂಪೂರ್ಣವಾಗಿ ಹಾಕಿ ಮಿಶ್ರಣ ಮಾಡಿದ ದ್ರಾವಣವನ್ನು ವಾಂತಿ ಬೇಧಿ ಭಾದಿತರಿಗೆ ಕುಡಿಯಲು ಕೊಡಬೇಕು ಮತ್ತು ಅದನ್ನು 24 ಗಂಟೆಯೊಳಗೆ ಸಂಪೂರ್ಣವಾಗಿ ಬಳಸಬೇಕು ಎಂದು ಅವರು ವಿವರಿಸಿದರು.
ಸಾರ್ವಜನಿಕರು ಮಲ-ಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೆ ಬಳಸಬೇಕು. ತಂಗಳು ಆಹಾರ ಸೇವಿಸದೆ ಬೆಳಗಿನ ಆಹಾರ ಬೆಳಿಗ್ಗೆ ಮತ್ತು ರಾತ್ರಿ ಆಹಾರ ರಾತ್ರಿ ಮಾತ್ರ ಬಳಸಬೇಕು. ತಯಾರಿಸಿದ ಅಹಾರದ ಮೇಲೆ ನೊಣಗಳು ಕುಡದಂತೆ ಮುಚ್ಚಳವನ್ನು ಮುಚ್ಚಬೇಕು. ಕುಡಿಯುವ ನೀರು ತುಂಬಿದ ನಂತರ ಪಾತ್ರೆಗಳಿಗೆ ಮುಚ್ಚಳ ಮುಚ್ಚಬೇಕು. ಆದಷ್ಟು ನಳ ಇರುವ ಪಾತ್ರೆಗಳನ್ನು ಬಳಸಿ. ನೀರಿನಲ್ಲಿ ಕೈ ಇಡದಂತೆ ಮುಂಜಾಗೃತೆ ವಹಿಸಬೇಕು. ರಸ್ತೆ ಬದಿ ತೆರೆದಿಟ್ಟ ಅಥವಾ ಕತ್ತರಿಸಿದ ಹಣ್ಣುಗಳನ್ನು ತಿನ್ನಬಾರದು. ನೊಣಗಳು ಆಹಾರದ ಮೇಲೆ ಕುಳಿತುಕೊಳ್ಳುವ ಸಾಧ್ಯತೆಯಿದೆ.
ವಾಂತಿ-ಬೇಧಿ ಅಥವಾ ಕಾಲರಾ ಸೋಂಕಿತರಿಗೆ ಮನೆಯಲ್ಲಿಯೆ ತಯಾರಿಸಿದ ಗಂಜಿ, ಬೇಳೆ ತಿಳಿ, ನಿಂಬು ಪಾನಕ ಹಾಗೂ ಎಳೆನೀರು ಕುಡಿಯಲು ಕೊಡಬೇಕು. ಊಟದ ಮೊದಲು ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ತಪ್ಪದೆ ತೊಳೆಯಬೇಕು ಎಂದು ತಿಳಿಸಿದರು.