ಚಿಕ್ಕಮಗಳೂರು: ಕಳಸ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪ್ರಥಮ ದರ್ಜೆ ಸಹಾಯಕರನ್ನು ಕರ್ತವ್ಯಲೋಪ ಆರೋಪದಡಿ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ನವೆಂಬರ್ 7ರಂದು ಅಮಾನತು ಮಾಡಿ ಆದೇಶಿಸಿದ್ದಾರೆ.
ಪ್ರಥಮ ದರ್ಜೆ ಸಹಾಯಕರಾದ ಶರತ್ ಕುಮಾರ್ ಮತ್ತು ಪ್ರಕಾಶ್ ಅವರು ಮೇಲಾಧಿಕಾರಿಗಳ ನಿರ್ದೇಶನ ಪಾಲಿಸುತ್ತಿಲ್ಲ. ಸಾರ್ವಜನಿಕರ ಭೇಟಿಗೆ ಸಿಗದೇ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಿಸಿಗೆ ವರದಿ ನೀಡಿದ್ದರು. ಇದನ್ನು ಆಧರಿಸಿ ಇಬ್ಬರನ್ನು ಅಮಾನತು ಮಾಡಲಾಗಿದೆ.
2024 -25 ನೇ ಸಾಲಿನ ಮಳೆ ಹಾನಿ ಸಂತ್ರಸ್ತರ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಲು ಪ್ರಕಾಶ್ ನಿರ್ಲಕ್ಷ್ಯ ತೋರಿಸಿದ್ದರು. ನೌಕರರ ಇ- ಆಫೀಸ್ ಲಾಗಿನ್ ಅನ್ನು ಸ್ವತಃ ಬಳಕೆ ಮಾಡದೆ ಆಪರೇಟರ್ ಮೂಲಕ ಕಡತ ವಿಲೇವಾರಿ ಮಾಡಿಸುತ್ತಿದ್ದರು ಎನ್ನುವ ಆರೋಪವಿದೆ.
ಶರತ್ ಕುಮಾರ್ ಕಚೇರಿ ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಬಾರದೆ ನಿರ್ಲಕ್ಷ ವಹಿಸಿದ್ದರು. ಸಾರ್ವಜನಿಕ ಕೆಲಸಗಳ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದರು. ಇ-ಆಫೀಸ್ ಲಾಗಿನ್ ಬಳಕೆ ಮಾಡದೆ ಆಪರೇಟರ್ ಮೂಲಕ ಕಡತ ವಿಲೇವಾರಿ ಮಾಡಿಸುತ್ತಿದ್ದರು ಎನ್ನುವ ದೂರುಗಳಿದ್ದವು.
ಇವರ ಮೇಲಿನ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.