ಥಾಣೆ: ಹನಿಮೂನ್ ಗೆ ಹೋಗುವ ಸ್ಥಳದ ಸಂಬಂಧ ಗೊಂದಲ ಉಂಟಾಗಿ ಅಳಿಯನ ಮೇಲೆ ಮಾವನೇ ಆಸಿಡ್ ಎರಚಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ನವ ವಿವಾಹಿತ ಇಬಾದ್ ಅತೀಕ್ ಫಾಲ್ಕೆ(29) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಗುಲಾಂ ಮುರ್ತುಜಾ ಖೋತಾಲ್(65) ಅಳಿಯನ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಲ್ಯಾಣ್ ಪ್ರದೇಶದ ಬಜಾರ್ ಪೇಟೆ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ಗೌಡ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಖೋತಾಲ್ ಪುತ್ರಿಯನ್ನು ಇತ್ತೀಚೆಗೆ ಇಬಾದ್ ಮದುವೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ಹನಿಮೂನ್ ಹೋಗುವುದು ಅವರ ಬಯಕೆಯಾಗಿತ್ತು. ಆದರೆ, ನವದಂಪತಿ ವಿದೇಶದ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬೇಕೆಂದು ಆರೋಪಿ ಖೋತಾಲ್ ಒತ್ತಾಯಿಸಿದ್ದ. ಇದೇ ವಿಚಾರಕ್ಕೆ ಮಾವ, ಅಳಿಯನ ನಡುವೆ ಜಗಳವಾಗಿದ್ದು, ಬುಧವಾರ ರಾತ್ರಿ ಇಬಾದ್ ಮನೆಗೆ ಬಂದಾಗ ಮಾವ ಖೋತಾಲ್ ಆಸಿಡ್ ಎರಚಿ ಪರಾರಿಯಾಗಿದ್ದಾನೆ.