ಬೆಂಗಳೂರು: ತಂದೆ ಬೈದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಪುತ್ರ ಮರ್ಮಾಂಗಕ್ಕೆ ಹೊಡೆದು ತಂದೆಯನ್ನೇ ಕೊಲೆ ಮಾಡಿದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
56 ವರ್ಷದ ಚನ್ನಬಸವರಾಜು ಕೊಲೆಯಾದ ವ್ಯಕ್ತಿ. ಚನ್ನಬಸವರಾಜು ಅವರನ್ನು ಅವರ ಪುತ್ರ ರಾಕೇಶ್ ಕುಮಾರ್(25) ಕೊಲೆ ಮಾಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಸೆ. 21 ರಂದು ರಾಕೇಶ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ, ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಚನ್ನಬಸವರಾಜು ಬೈದು ಬುದ್ಧಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಕೇಶ್ ಸಲಾಕೆಯಿಂದ ತಂದೆಯ ಮರ್ಮಂಗಕ್ಕೆ ಬಲವಾಗಿ ಹೊಡೆದಿದ್ದು, ಮುಷ್ಟಿಯಿಂದ ಗುದ್ದಿದ್ದಾನೆ. ಚನ್ನಬಸವರಾಜು ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಮನೆಗೆ ಬಂದ ರಾಕೇಶ್ ತಾಯಿ ನಳಿನಾಕ್ಷಿ ಬಳಿ ನಡೆದ ವಿಷಯ ತಿಳಿಸಿದ್ದು, ಅವರು ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಈ ವೇಳೆಗಾಗಲೇ ಚನ್ನಬಸವರಾಜ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಕಾಡುಗೋಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.