
ಬೆಂಗಳೂರು: ಬೈಕ್ ವಿಚಾರವಾಗಿ ತಂದೆ ಮಗನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನ ಅನ್ನಪೂರ‍್ನೇಶ್ವರಿ ನಗರ ಮುದ್ದನಪಾಳ್ಯದಲ್ಲಿ ನಡೆದಿದೆ.
ವೆಂಕಟೇಶ್ ಎಂಬಾತ ತನ್ನ ಮಗ ಅಂಜನ್ ಕುಮಾರ್ (27)ನನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ. ರಿಯಲ್ ಎಸ್ಟೇಟ್ ಬ್ರೋಕರ್ ಆಗಿದ್ದ ವೆಂಕಟೇಶ್, ಮಗಳ ಬೈಕ್ ತೆಗೆದುಕೊಂಡು ಹೊರಗೆ ಹೋಗಿದ್ದರು. ಆದರೆ ರಾತ್ರಿ ಮನೆಗೆ ವಾಪಾಸ್ ಆದಾಗ ಬೈಕ್ ಇಲ್ಲದೇ ಮನೆಗೆ ಬಂದಿದ್ದಾರೆ. ಇದನ್ನು ಕಂಡ ಮಗ ಅಂಜನ್ ಬೈಕ್ ಎಲ್ಲಿ ಎಂದು ಪ್ರಶ್ನಿಸಿದ್ದಾನೆ.
ಎಲ್ಲೋ ಬಿಟ್ಟು ಬಂದಿದ್ದೇನೆ. ಈಗ ಹೋಗಿ ತರುತ್ತೇನೆ ಎಂದು ಉಡಾಫೆಯಾಗಿ ತಂದೆ ಉತ್ತರಿಸಿದ್ದಾರೆ. ಇದರಿಂದ ತಂದೆ ಮಗನ ನಡುವೆ ಜಗಳ ಶುರುವಾಗಿದೆ. ಗಲಾಟೆಯಲ್ಲಿ ಮಗ ತಂದೆಗೆ ಹೆಲ್ಮೆಟ್ ನಿಂದ ಹೊಡೆದಿದ್ದಾನೆ. ತನ್ನನ್ನೇ ಮಗ ಹೊಡೆಯುತ್ತಿದ್ದಾನೆ ಎಂದು ಕೋಪಗೊಂಡ ವೆಂಕಟೇಶ್, ಅಡುಗೆ ಮನೆಯಿಂದ ಚಾಕು ತಂದು ಮಗ ಅಂಜನ್ ಗೆ ಮನಬಂದಂತೆ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಗ ಕುಸಿದು ಬಿದ್ದಿದ್ದಾನೆ.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಅಂಜನ್ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕೊಂದ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.