
ಕೇರಳದಲ್ಲಿ ಯುವಕನೊಬ್ಬ ತನ್ನ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮುನ್ನವೇ ಓಡಿಶಾದಲ್ಲಿ ಇಂತದ್ದೇ ಮತ್ತೊಂದು ಘಟನೆ ನಡೆದಿದೆ. ಯುವಕನೊಬ್ಬ ತನ್ನ ತಂದೆ-ತಾಯಿ ಹಾಗೂ ತಂಗಿ ಮೂವರನ್ನೂ ಕೊಲೆಗೈದಿರುವ ಘಟನೆ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಯುವಜನತೆಯ ಮನಃಸ್ಥಿತಿ ಯಾವ ಹಂತದ ಕ್ರೌರ್ಯಕ್ಕೆ ತಲುಪಿತ್ತಿದೆ….ಮನುಷತ್ವ, ಮಾನವೀಯತೆ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೆತ್ತವರನ್ನು, ಒಡಹುಟ್ಟಿದವರನ್ನು ಹತ್ಯೆ ಮಾಡುವಷ್ಟರ ಮಟ್ಟಿಗೆ ಕ್ರೂರತೆ, ವಿಲಕ್ಷಣಣೆ ಬೆಳೆಯುತ್ತಿದೆ ಎಂದರೆ ಭಯ ಹುಟ್ಟಿಸುತ್ತದೆ.
21 ವರ್ಷದ ಯುವಕ ಸೂರ್ಯಕಾಂತ್ ಸೇಥಿ, ಕೋಪದ ಬರದಲ್ಲಿ ಹೆತ್ತವರನ್ನು ಹಾಗೂ ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಓಡಿಶಾದ ಜಗತ್ಸಿಂಗ್ ಪುರದಲ್ಲಿ ಈ ಘಟನೆ ನಡೆದಿದೆ. ಕೊಲೆಯಾದವರನ್ನು ಪ್ರಶಾಂತ್ ಸೇಥಿ ಅಲಿಯಾಸ್ ಕಾಲಿಯಾ (65), ಪತ್ನಿ ಕನಕಲತಾ (62) ಹಾಗೂ ಮಗಳು ರೋಸ್ಲಿನ್ ಎಂದು ಗುರುತಿಸಲಾಗಿದೆ.
ಯುವಕ ತನ್ನ ಕುಟುಂಬದ ಜೊತೆ ಯಾವುದೋ ಕಾರಣಕ್ಕೆ ಜಗಳವಾಡಿದ್ದಾನೆ. ಬೆಳಗಾಗುವಷ್ಟರಲ್ಲಿ ಕಲ್ಲಿನಿಂದ ಜಜ್ಜಿ ಮೂವರನ್ನೂ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದಾನೆ. ಬೆಳಿಗ್ಗೆ ಮನೆ ತುಂಬ ರಕ್ತದ ಕಲೆಗಳನ್ನು ಕಂಡು ನೆರೆಹೊರೆಯವರು ಬೆಚ್ಚಿ ಬಿದ್ದಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಮಗನೇ ತಂದೆ-ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.