ತಂದೆಯ ನಿರ್ಲಕ್ಷ್ಯಕ್ಕೆ ಮಗು ಸಾವನ್ನಪ್ಪಿದ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. 16 ತಿಂಗಳ ಬಾಲಕಿ ತಂದೆ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿದ್ದಾಳೆ. ಕಾರಿನಲ್ಲಿದ್ದ ಮಗುವನ್ನು ಮರೆತು ಕಾರ್ ಲಾಕ್ ಮಾಡಿ ತಂದೆ ಕೆಲಸಕ್ಕೆ ಹೋಗಿದ್ದಾನೆ. ಉಸಿರುಗಟ್ಟಿ ಮಗು ಕಾರಿನಲ್ಲಿಯೇ ಸಾವನ್ನಪ್ಪಿದೆ. ಈ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
ವರದಿಯ ಪ್ರಕಾರ, ಬೆಳಿಗ್ಗೆ ತಂದೆ ತನ್ನ ಮಗಳೊಂದಿಗೆ ವಿಶ್ವವಿದ್ಯಾಲಯಕ್ಕೆ ಹೋಗಿದ್ದಾನೆ. ಕೆಲಸಕ್ಕೆ ಹೋಗುವ ಮೊದಲು ಮಗುವನ್ನು ಡೇ ಕೇರ್ ಗೆ ಬಿಡಬೇಕಾಗಿತ್ತು. ಆದ್ರೆ 16 ತಿಂಗಳ ಮಗುವನ್ನು ಡೇ ಕೇರ್ ಗೆ ಬಿಡದೆ ಮರೆತು ಕಾರಿನಲ್ಲೇ ಲಾಕ್ ಮಾಡಿ ಹೋಗಿದ್ದಾನೆ. ಸಂಜೆ 4.30ರ ಸುಮಾರಿಗೆ ತಂದೆಗೆ ಮಗು ಕಾರಿನಲ್ಲೇ ಇರೋದು ನೆನಪಿಗೆ ಬಂದಿದೆ. ತಕ್ಷಣ ಕಾರಿನ ಬಳಿ ಓಡಿದ್ದಾನೆ.
ಕಾರಿನಲ್ಲಿ ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಯುನಿವರ್ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ 16 ತಿಂಗಳ ಬಾಲಕಿ ಈಗಾಗಲೇ ಸಾವನ್ನಪ್ಪಿದೆ ಎಂದು ವೈದ್ಯರು ಹೇಳಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಮಲೇಷ್ಯಾ ಮಕ್ಕಳ ಕಾಯ್ದೆ 2001ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಮಗು ಸಾವಿಗೆ ತಂದೆ ನಿರ್ಲಕ್ಷ್ಯವೇ ಕಾರಣ ಎಂಬುದು ಸಾಭೀತಾದ್ರೆ ಆತನಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಅಲ್ಲದೆ ಕೋರ್ಟ್ ಭಾರಿ ದಂಡವನ್ನು ವಿಧಿಸಲಿದೆ.