ಗುಜರಾತ್‌ನಲ್ಲಿ ನಡೆಯುತ್ತಿರುವ ಮಂಡಳಿ ಪರೀಕ್ಷೆಗಳ ವೇಳೆ ಪೊಲೀಸರು ತೋರಿದ ಮಾನವೀಯ ನಡೆಯೊಂದು ಎಲ್ಲೆಡೆ ಸದ್ದು ಮಾಡುತ್ತಿದೆ.
ತನ್ನ ತಂದೆ ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ತನ್ನನ್ನು ಕರೆತಂದುಬಿಟ್ಟು ಹೋಗಿದ್ದಾರೆ ಎಂದು ತಿಳಿದ ವಿದ್ಯಾರ್ಥಿನಿಯೊಬ್ಬಳಿಗೆ ಈ ವಿಚಾರ ಅರಿವಾಗುತ್ತಿದ್ದಂತೆ ಭಾರೀ ಆತಂಕವುಂಟಾಗಿತ್ತು. ಇದಕ್ಕಿಂತ ಇನ್ನೂ ಭಯ ಹುಟ್ಟಿಸಿದ್ದ ವಿಚಾರವೆಂದರೆ ಆಕೆಯ ಪರೀಕ್ಷಾ ಕೇಂದ್ರ ತಾನಿದ್ದ ಜಾಗದಿಂದ 20 ಕಿಮೀ ದೂರದಲ್ಲಿದ್ದಿದ್ದು ಹಾಗೂ ಆಕೆಯ ತಂದೆ ಆಕೆಯೊಂದಿಗೆ ಆಗ ಇಲ್ಲದೇ ಇದ್ದಿದ್ದು.
ಇಂಥ ಸಂದರ್ಭದಲ್ಲಿ ಕೂಡಲೇ ಆಕೆಯ ನೆರವಿಗೆ ಬಂದ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯೊಬ್ಬರು, ಆಕೆಯನ್ನು ಸರಿಯಾದ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯದಲ್ಲಿ ಕರೆದುಕೊಂಡು ಹೋಗಿದ್ದಾರೆ.
ಸರಿಯಾದ ಸಮಯದಲ್ಲಿ ಆಗಮಿಸಿ, ಸಮಯಪ್ರಜ್ಞೆ ಮೆರೆದು ಬಾಲಕಿಯ ಒಂದು ವರ್ಷವನ್ನು ಉಳಿಸಿದ ಪೊಲೀಸ್ ಅಧಿಕಾರಿ ಹಾಗೂ ಆಕೆಯನ್ನು ಶರವೇಗದಲ್ಲಿ ಪರೀಕ್ಷಾ ಕೇಂದ್ರ ತಲುಪಲು ನೆರವಾದ ಇತರೆ ಎಲ್ಲಾ ಸಿಬ್ಬಂದಿಗೂ ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಶಹಬ್ಬಾಸ್‌ಗಿರಿ ಸಲ್ಲಿಸಿದ್ದಾರೆ.