ಶಿವಮೊಗ್ಗ: ತಂದೆಯ ಸಾವಿನ ನೋವಲ್ಲಿಯೂ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು, ಆಕೆಗೆ ಬೆಂಬಲವಾಗಿ ನಿಂತ ಪ್ರಾಂಶುಪಾಲರು ಮತ್ತು ಶಿಕ್ಷಕರ ಶ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಗೇರುಪುರದ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಕೊಪ್ಪಳ ಮೂಲದ ಆರ್ಶಿಯಾ ಮನಿಯಾರ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯಾಗಿದ್ದಾರೆ. ಆಕೆಯ ತಂದೆ ಅಬೀದ್ ಪಾಷಾ ಬುಧವಾರ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದು, ಕುಟುಂಬದವರು ಶಾಲೆಯ ಪ್ರಾಚಾರ್ಯ ಯೋಗೇಶ್ ಹೆಚ್. ಹೆಬ್ಬಳಗೆರೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಗಳು ಪರೀಕ್ಷೆ ಬರೆಯದಿದ್ದರೂ ಚಿಂತೆ ಇಲ್ಲ. ತಂದೆಯ ಅಂತಿಮ ದರ್ಶನಕ್ಕೆ ಕಳಿಸಿಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.
ವಿದ್ಯಾರ್ಥಿನಿಯ ಭವಿಷ್ಯದ ದೃಷ್ಟಿಯಿಂದ ಶಾಲೆಯ ಆಡಳಿತ ಮಂಡಳಿಯವರು ರಾತ್ರೋರಾತ್ರಿ ತಮ್ಮ ಸ್ವಂತ ಖರ್ಚಿನಲ್ಲಿ ಖಾಸಗಿ ವಾಹನದಲ್ಲಿ ಕೊಪ್ಪಳಕ್ಕೆ ಕರೆದುಕೊಂಡು ಹೋಗಿ ಬೆಳಗಿನ ಜಾವ ತಂದೆಯ ಅಂತಿಮ ದರ್ಶನ ಮಾಡಿಸಿದ್ದಾರೆ. ಊರಿಗೆ ಹೋದ ನಂತರ ಆರ್ಶಿಯಾಗೆ ತಂದೆಯ ನಿಧನದ ಸುದ್ದಿ ತಿಳಿದಿದೆ. ಕುಟುಂಬದವರೊಂದಿಗೆ ಆರ್ಶಿಯಾ ಕಣ್ಣೀರಿಟ್ಟಿದ್ದಾಳೆ. ನಂತರ ಶಿಕ್ಷಕರು ಆಕೆಯ ಕುಟುಂಬದವರ ಮನವೊಲಿಸಿ ಸ್ವಲ್ಪ ಹೊತ್ತಿನಲ್ಲಿಯೇ ಕೊಪ್ಪಳದಿಂದ ಹೊರಟಿದ್ದಾರೆ. ಬೆಳಗ್ಗೆ 10:20ರ ವೇಳೆಗೆ ಹೊಸನಗರದ ಪರೀಕ್ಷಾ ಕೇಂದ್ರಕ್ಕೆ ಆಕೆಯನ್ನು ಕರೆತಂದಿದ್ದಾರೆ.
ಗುರುವಾರ ಆರ್ಶಿಯಾ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾಳೆ. ತಂದೆ ಆಗಲಿಕೆ ನೋವಲ್ಲಿಯೂ ಆರ್ಶಿಯಾ ಉತ್ತಮವಾಗಿ ಪರೀಕ್ಷೆ ಬರೆದಿದ್ದಾಳೆ. ಪರೀಕ್ಷೆಯ ನಂತರ ಆನ್ಲೈನ್ ನಲ್ಲಿ ತಂದೆಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಆಕೆಗೆ ಸಮಾಧಾನ ಹೇಳಿ ಮುಂದಿನ ಪರೀಕ್ಷೆಗೆ ಸಿದ್ಧಪಡಿಸಲಾಗುತ್ತಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.