ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಐದು ಅಪ್ಪ -ಮಕ್ಕಳ ಜೋಡಿ ಜಯಗಳಿಸಿದ್ದು, ಒಟ್ಟಿಗೆ ವಿಧಾನಸಭೆ ಪ್ರವೇಶಿಸುತ್ತಿರುವುದು ವಿಶೇಷವಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ 8ನೇ ಬಾರಿಗೆ ಜಯಗಳಿಸಿದ್ದು, ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಜಯಗಳಿಸಿದ್ದಾರೆ.
ಬೆಂಗಳೂರಿನ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಕೃಷ್ಣಪ್ಪ, ಅವರ ಪುತ್ರ ಗೋವಿಂದರಾಜ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ದೇವನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪ, ಅವರ ಪುತ್ರಿ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಕೆಜಿಎಫ್ ಕ್ಷೇತ್ರದಿಂದ ಶಾಸಕರಾಗಿದ್ದಾರೆ.
ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ. ಮಂಜು, ಅವರ ಪುತ್ರ ಮಡಿಕೇರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ, ಹುಣಸೂರು ಕ್ಷೇತ್ರದಲ್ಲಿ ಜಿ.ಡಿ. ಹರೀಶ್ ಗೌಡ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜಯಗಳಿಸಿದ್ದು, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಸೋಲು ಕಂಡಿದ್ದಾರೆ.
ಬಿಟಿಎಂ ಲೇಔಟ್ ನಲ್ಲಿ ರಾಮಲಿಂಗಾರೆಡ್ಡಿ ಜಯಗಳಿಸಿದ್ದು, ಅವರ ಪುತ್ರಿ ಸೌಮ್ಯಾರೆಡ್ಡಿ ಜಯನಗರ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ.
ನಾಯಕರ ಮಕ್ಕಳು:
ಶಿಕಾರಿಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಮೊದಲ ಬಾರಿಗೆ ಶಾಸಕರಾಗಿದ್ದಾರೆ. 9 ಸಲ ಶಾಸಕರಾಗಿದ್ದ ದಿ. ಉಮೇಶ್ ಕತ್ತಿ ಅವರ ಪುತ್ರ ನಿಖಿಲ್ ಉಮೇಶ್ ಕತ್ತಿ ಹುಕ್ಕೇರಿ ಬಿಜೆಪಿ ಶಾಸಕರಾಗಿದ್ದಾರೆ.
ಹರಪನಹಳ್ಳಿಯಲ್ಲಿ ಮಾಜಿ ಡಿಸಿಎಂ ದಿ. ಎಂ.ಪಿ. ಪ್ರಕಾಶ್ ಪುತ್ರಿ ಎಂ.ಪಿ. ಲತಾ ಮಲ್ಲಿಕಾರ್ಜುನ್. ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ. ದಿ.ಆರ್. ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್ ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಚುನಾಯಿತರಾಗಿದ್ದಾರೆ.
ರೈತ ನಾಯಕ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಚಿತ್ರನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಚಿತ್ರದುರ್ಗದಲ್ಲಿ ಕಾಂಗ್ರೆಸ್ ನಿಂದ ಚುನಾಯಿತರಾಗಿದ್ದಾರೆ.