ಹೆಣ್ಣುಮಕ್ಕಳು ಶಾಲೆಗೆ ಗೈರು ಹಾಜರಾಗಲು ಅವರು ಎದುರಿಸುತ್ತಿರುವ ಮುಟ್ಟಿನ ಸಮಸ್ಯೆಯೇ ಕಾರಣ ಎಂದು ಇಲ್ಲೊಬ್ಬ ಮಕ್ಕಳ ತಂದೆ ಅರ್ಜಿ ಸಲ್ಲಿಸಿ, ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಇವರು ಸಲ್ಲಿಸಿರುವ ಅರ್ಜಿ ವೈರಲ್ ಆಗಿದೆ.
ಯುಕೆ ಯ ಕಾರ್ನ್ ವಾಲ್ ನ ಮಾರ್ಕಸ್ ಆಲೀನ್ ಎಂಬುವವರು ಹೆಣ್ಣುಮಕ್ಕಳ ಪರ ನಿಂತಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ಶಾಲೆಗಳಿಗೆ ಪ್ರಚಾರ ಮಾಡುತ್ತಿದ್ದಾರೆ. ಅವರ 13 ವರ್ಷದ ಮಗಳಿಗೆ ಋತುಚಕ್ರದ ನೋವಿನಿಂದ ಬಳಲುತ್ತಿರುವಾಗ ಶಾಲೆಗೆ ರಜಾ ಹಾಕಲು ಆಕೆಗೆ ಇಷ್ಟವಿರಲಿಲ್ಲ. ಹೀಗಾಗಿ ತನ್ನ ಚೇಂಜ್.ಆರ್ಗ್ ಅರ್ಜಿಯಲ್ಲಿ 32,000 ಕ್ಕೂ ಹೆಚ್ಚು ಸಹಿಗಳೊಂದಿಗೆ, ಮಾರ್ಕಸ್ ಸಮಸ್ಯೆಯನ್ನು ಇತರ ಕಾಯಿಲೆಗಳಂತೆಯೇ ಪರಿಗಣಿಸಬೇಕೆಂದು ಬಯಸಿದ್ದಾನೆ.
ಮಾರ್ಕಸ್ ತನ್ನ ಮಗಳು ‘ಭಯಾನಕ’ ನೋವಿನೊಂದಿಗೆ ಹೋರಾಡುತ್ತಿದ್ದಾಗ ಮತ್ತು ನಿದ್ದೆ ಮಾಡಲು ಸಾಧ್ಯವಾಗದಿದ್ದಾಗ, ಅವಳನ್ನು ಶಾಲೆಗೆ ಕಳುಹಿಸುವುದು ಸರಿಯೋ ಅಥವಾ ಸೂಕ್ತವೋ ಎಂದು ನಮಗೆ ಅನಿಸಲಿಲ್ಲ ಎಂದು ಹೇಳಿದ್ದಾರೆ. ಆದರೆ, ಅವನು ತನ್ನ ಮಗಳ ಬಗ್ಗೆ ತಿಳಿಸಲು ಶಾಲೆಗೆ ಕರೆ ಮಾಡಿದಾಗ, ಪ್ರತಿಕ್ರಿಯೆ ಕೇಳಿ ಆತನಿಗೆ ಗಾಬರಿಯಾಯಿತು.
“ಮಗಳ ಶಾಲೆಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಇದು ಪಿರಿಯಡ್ ನೋವಿನಿಂದ ಉಂಟಾಗಿದೆಯೇ ಎಂದು ಶಾಲೆ ಕೇಳಿದೆ. ಮತ್ತು ನಾನು ಹೌದು ಎಂದು ಹೇಳಿದೆ. ಇದನ್ನು ಅನಧಿಕೃತ ಗೈರುಹಾಜರಿಯಲ್ಲಿ ದಾಖಲಿಸಲಾಗುವುದು ಎಂದು ಶಾಲೆ ಪ್ರತಿಕ್ರಿಯಿಸಿದೆ” ಇದರಿಂದ ನಿಜಕ್ಕೂ ಗಾಬರಿಯಾಯ್ತು ಎಂದಿದ್ದಾರೆ. ಇದು ಕೇವಲ ಮಹಿಳೆಯ ಸಮಸ್ಯೆ ಅಲ್ಲ, ಇದು ಸಾಮಾಜಿಕ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಇನ್ನು ಈ ಅರ್ಜಿಯು 35,000 ಸಹಿಗಳ ಗುರಿಯನ್ನು ಹೊಂದಿದೆ ಎಂದು ಮಾರ್ಕಸ್ ಹೇಳಿದ್ದಾರೆ.