ಬೆಂಗಳೂರು: ಮನೆಯಲ್ಲೇ ಮಗಳೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಆಕೆಯ ಪ್ರಿಯಕರನ ಕೊಲೆ ಮಾಡಿದ ಆರೋಪಿಯನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿನೋಬನಗರದ ಆಟೋಚಾಲಕ ನಾರಾಯಣ(46) ಬಂಧಿತ ಆರೋಪಿಯಾಗಿದ್ದಾನೆ. ಕೊಲೆ ಮಾಡಿದ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣನ ಪುತ್ರಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದ ಎದುರು ಮನೆಯ ಯುವಕ ನಿವೇಶ್ ಕುಮಾರ್(19) ಎಂಬುವನನ್ನು ಥಳಿಸಿ ಕೊಲೆ ಮಾಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆನ್ನಲಾಗಿದೆ.
ನಾರಾಯಣ ಮನೆಯ ಸಮೀಪವೇ ನಿವೇಶ್ ಕುಮಾರ್ ದೊಡ್ಡಪ್ಪನ ಮನೆಯಲ್ಲಿ ವಾಸವಾಗಿದ್ದ. ಆತನ ದೊಡ್ಡಪ್ಪನ ಕುಟುಂಬದವರು ಊರಿಗೆ ಹೋಗಿದ್ದರು. ನವೆಂಬರ್ 28 ರಂದು ಬೆಳಗಿನ ಜಾವ ಆಟೋ ಚಾಲಕ ನಾರಾಯಣ ಮನೆಯಿಂದ ಹೊರಗೆ ಹೋಗಿದ್ದಾರೆ. ಈ ವೇಳೆಗೆ ಮನೆಗೆ ಬಂದಿದ್ದ ನಿವೇಶ್ ಕುಮಾರ್ ಜೊತೆಗೆ ನಾರಾಯಣನ ಪುತ್ರಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಳೆ. ನಾರಾಯಣ ಕೆಲಸಮಯದಲ್ಲೇ ಮನೆಗೆ ವಾಪಸಾಗಿದ್ದು, ಪುತ್ರಿಯೊಂದಿಗೆ ಇದ್ದ ನಿವೇಶ್ ನನ್ನು ಕಂಡು ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ನಿವೇಶ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ. ಆತನ ದೊಡ್ಡಪ್ಪ ನೀಡಿದ್ದ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆನ್ನಲಾಗಿದೆ.